ನಗರಪಾಲಿಕೆಯ ಆನ್‍ಲೈನ್ ತೆರಿಗೆ ಲೆಕ್ಕ ಹಾಕುವಲ್ಲಿ ಲೋಪ

ನಗರಪಾಲಿಕೆಯ ಆನ್‍ಲೈನ್ ತೆರಿಗೆ ಲೆಕ್ಕ ಹಾಕುವಲ್ಲಿ ಲೋಪ - Janathavaniತಡವಾಗಿ ಕರ ಪಾವತಿಸಿದರೆ ಕಟ್ಟುವ ಬಡ್ಡಿಗೂ ಸೆಸ್‍

ದಾವಣಗೆರೆ, ಜು.19- ಮಹಾನಗರ ಪಾಲಿಕೆಯ ಆನ್‍ಲೈನ್ ತೆರಿಗೆ ಲೆಕ್ಕ ಹಾಕುವಲ್ಲಿ ಲೋಪವೆಸಗಿದ್ದು, ನಾಗರಿಕರು ತಡವಾಗಿ ಕರ ಪಾವತಿಸಿದರೆ ಬಡ್ಡಿಗೂ ಸೆಸ್‌ ವಿಧಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್ ಅವರು ಪಾಲಿಕೆ ಆಡಳಿತದ ಬಗ್ಗೆ ಗಮನ ಸೆಳೆದಿದ್ದಾರೆ.

2004-2005ನೇ ಸಾಲಿನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಚಾಲ್ತಿಗೆ ಬಂದಿದ್ದು, ವಾರ್ಷಿಕ ಕಂದಾಯವನ್ನು ಮುಂಗಡವಾಗಿ ನೀಡಿದರೆ, ಕೆಲವು ವಿನಾಯಿತಿಯನ್ನು ನೀಡಲಾಗುತ್ತಿದೆ. ಈಗ ಅಂದರೆ 2019-20 ರಿಂದ ತೆರಿಗೆ ಪಾವತಿಸಲು ಪಾಲಿಕೆ ಆನ್‍ಲೈನ್ ಮೂಲಕ ತೆರಿಗೆ ಮಾಹಿತಿ ನೀಡುತ್ತಿದ್ದು, ಇದರಲ್ಲಿ ತೆರಿಗೆ ವಿಧಿಸುವ ವೇಳೆ ಹಿಂದಿನ ವರ್ಷದ ತೆರಿಗೆ ಪಾವತಿಸದೇ ಇದ್ದಲ್ಲಿ ಸೆಸ್ ಸೇರಿಸಿ, ಒಟ್ಟಾಗುವ ಹಣಕ್ಕೆ ಬಡ್ಡಿ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

2019-20ನೇ ಸಾಲಿನ ಕರ ಕನಿಷ್ಠ ಸಾವಿರ ರೂ. ಇದ್ದರೆ 2020-21ರಲ್ಲಿ ಪಾವತಿಸಿದರೆ ಶೇ.2 ರಷ್ಟು ಸುಮಾರು 150 ರೂ. ಬಡ್ಡಿ ವಿಧಿಸಲಾಗುತ್ತಿದೆ. 1 ಸಾವಿರಕ್ಕೆ 150 ರೂ. ಆದರೆ, 10 ಸಾವಿರ ರೂ. ಗೆ 1,500 ರೂ. 1 ಲಕ್ಷ ಕರಕ್ಕೆ 15,000 ರೂ. ಆಗಲಿದ್ದು, ವಸತಿ ಕರ ಪಾವತಿದಾರರಿಗೆ ಸಣ್ಣ ಪ್ರಮಾಣದಲ್ಲಿ ಹೊರೆಯಾದರೆ, ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡಗಳನ್ನು ಹೊಂದಿರುವವರು ಭಾರೀ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ.

ಮಹಾನಗರ ಪಾಲಿಕೆ ಆಡಳಿತಕ್ಕೆ ಈ ಬಗ್ಗೆ ಗೊತ್ತಿದೆಯೋ ಇಲ್ಲವೋ ಆದರೆ, ನಾಗರಿಕರಿಗಂತೂ ಹೊರೆ ಆಗುತ್ತಿದೆ. ಈ ಬಗ್ಗೆ ಪಾಲಿಕೆ ಆಡಳಿತ ಸೂಕ್ತ ಕ್ರಮ ವಹಿಸಿ, ಸೆಸ್‍ಗೂ ಬಡ್ಡಿ ಹಾಕದಂತೆ ಪಾರದರ್ಶಕವಾಗಿ ಕರ ವಸೂಲಿಗೆ ಮುಂದಾಗಬೇಕೆಂದು ನಾಗರಿಕರ ಪರವಾಗಿ ಶಿವನಳ್ಳಿ ರಮೇಶ್ ವಿನಂತಿಸಿದ್ದಾರೆ.

error: Content is protected !!