ಸರ್ಕಾರದ ತೆರಿಗೆ ಸಂಗ್ರಹಣೆಗೆ ಹಿನ್ನಡೆ
ದಾವಣಗೆರೆ, ಜು. 19 – ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ ಎಂಬಂತೆ ಜನತೆ ತೆರಿಗೆ ಪಾವತಿಸಿದರೂ ಸಹ ವರ್ತಕರು ಕೊರೊನಾ ನೆಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ. ಇದರಿಂದಾಗಿ ಸರ್ಕಾರದ ಆದಾಯ ಸಂಗ್ರಹಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಹಲವಾರು ವಲಯಗಳಿಗೆ ಹಿನ್ನಡೆಯಾಗಿತ್ತು. ಆದರೆ, ಕಿರಾಣಿ ಮುಂತಾದ ಅಗತ್ಯ ವಸ್ತುಗಳ ಸೇವೆಯನ್ನು ಎಂದಿನಂತೆ ಮುಂದುವರೆಸಲಾಗಿತ್ತು. ಈ ಅಗತ್ಯ ಸೇವೆಯವರೂ ಸಹ ತೆರಿಗೆ ಪಾವತಿಸಲು ಉತ್ಸಾಹ ತೋರದೇ ತಡ ಮಾಡುತ್ತಿದ್ದಾರೆ.
ಸಾಕಷ್ಟು ಕಿರಾಣಿ ವರ್ತಕರು ಜಿಎಸ್‌ಟಿ ತೆರಿಗೆ ಪಾವತಿಯಲ್ಲಿ ಕಂಪೋಸಿಷನ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ವರ್ತಕರು ಶೇ.1ರ ತೆರಿಗೆ ಪಾವತಿಸಬೇಕಾಗುತ್ತದೆ. ಆದರೂ, ಹಲ ವರು ಮೂರು ತಿಂಗಳು ವ್ಯಾಪಾರ ಮಾಡೇ ಇಲ್ಲ ಎನ್ನುತ್ತಿದ್ದಾರೆ. ತೆರಿಗೆ ಅಧಿಕಾರಿಗಳು ಬಲವಂ ತದ ಕ್ರಮದ ಮೂಲಕವೇ ಇವರಿಂದ ತೆರಿಗೆ ವಸೂಲಿ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ.
ವರ್ತಕರು ಒಂದೆಡೆ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಆದರೆ, ಬಿಲ್ ಕೊಡುತ್ತಿಲ್ಲ. ಇದರಿಂದಾಗಿ ತೆರಿಗೆ ಕಟ್ಟುವುದನ್ನು ಮುಂದೂಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿಗಳನ್ನು ಒಳಗೊಂಡ ವಾಣಿಜ್ಯ ತೆರಿಗೆ ಹಾಗೂ ಆದಾಯ ತೆರಿಗೆ ವಿಭಾಗದಲ್ಲಿ ಪಾವತಿಯಾದ ತೆರಿಗೆ ಪರಿಯನ್ನು ನೋಡಿದರೆ ವಾಸ್ತವ ಸ್ಥಿತಿ ಸ್ಪಷ್ಟವಾಗುತ್ತದೆ.
ಜನರಿಂದ ವಸೂಲಿ ಮಾಡಿದ ಜಿ.ಎಸ್.ಟಿ. ಅನ್ನು ಸರ್ಕಾರಕ್ಕೆ ಕಟ್ಟುವುದು ಅನಿವಾರ್ಯವಾಗಿದೆ. ಈಗ ಬಿಟ್ಟರೂ ಸಹ, ಮುಂದಿನ ದಿನಗಳಲ್ಲಿ ಅದನ್ನು ಕಟ್ಟಲೇಬೇಕಾದ ಅನಿವಾರ್ಯತೆ ಇದೆ.
– ಜಂಬಿಗಿ ರಾಧೇಶ್, ಅಧ್ಯಕ್ಷರು, ತೆರಿಗೆ ಸಲಹೆಗಾರರ ಸಂಘ
2018-19ರ ಏಪ್ರಿಲ್ – ಜೂನ್ ಅವಧಿಯಲ್ಲಿ ಈ ವಿಭಾಗದಲ್ಲಿ ಜಿ.ಎಸ್.ಟಿ. ಸಂಗ್ರಹ 388.21 ಕೋಟಿ ರೂ. ಆಗಿತ್ತು. ಈ ಬಾರಿ ಇದೇ ಅವಧಿಯಲ್ಲಿ ತೆರಿಗೆ ಸಂಗ್ರಹ ಕೇವಲ 182.12 ಕೋಟಿ ರೂ. ಆಗಿದೆ.
2019ರ ಏಪ್ರಿಲ್ ತಿಂಗಳಲ್ಲಿ ತೆರಿಗೆ ಸಂಗ್ರಹ 134.54 ಕೋಟಿ ರೂ. ಆಗಿತ್ತು. ಅದೇ 2020ರ ಏಪ್ರಿಲ್ ತಿಂಗಳಲ್ಲಿ ಕೇವಲ 4.22 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. 2019ರ ಜೂನ್ ತಿಂಗಳಲ್ಲಿ 129.33 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, 2020ರ ಜೂನ್‌ನಲ್ಲಿ 111.14 ಕೋಟಿ ರೂ. ಸಂಗ್ರಹವಾಗಿದ್ದು ಸಾಕಷ್ಟು
ಚೇತರಿಕೆಯಾಗಿದೆ.
ಆದಾಯ ತೆರಿಗೆಯಲ್ಲೂ ಸಹ ನಿರೀಕ್ಷಿತ ಬೆಳವಣಿಗೆಯಾಗಿಲ್ಲ. 2019-20ರ ಸಾಲಿನಲ್ಲಿ ಆದಾಯ ತೆರಿಗೆ ಸಂಗ್ರಹ 300 ಕೋಟಿ ರೂ. ಆಗಿತ್ತು. 2020-21ರ ಸಾಲಿನಲ್ಲಿ ಈವರೆಗೆ ಮುಂಗಡ ತೆರಿಗೆ ಪಾವತಿ ಕೇವಲ 50 ಕೋಟಿ ರೂ. ಆಗಿದೆ.
ಕೊರೊನಾ ಸಮಯದಲ್ಲಿ ಸರ್ಕಾರ ಸಾಮಾನ್ಯ ಕಾರ್ಯ ನಿರ್ವಹಣೆಯ ಜೊತೆಗೆ ಸೋಂಕನ್ನೂ ನಿಭಾಯಿಸಬೇಕಿದೆ. ಈ ಸಂದರ್ಭದಲ್ಲಿ ವರ್ತಕರು ಸಮರ್ಪಕವಾಗಿ ತೆರಿಗೆ ಪಾವತಿಸಿದರೆ ಅದು ದೇಶಕ್ಕೆ ಹಾಗೂ ಜನರಿಗೆ ನೆರವಾಗಲಿದೆ.
ಜನರಿಂದ ವಸೂಲಿ ಮಾಡಿದ
ಜಿ.ಎಸ್.ಟಿ. ಅನ್ನು ಸರ್ಕಾರಕ್ಕೆ ಕಟ್ಟುವುದು ಅನಿವಾರ್ಯವಾಗಿದೆ. ಈಗ ಬಿಟ್ಟರೂ ಸಹ, ಮುಂದಿನ ದಿನಗಳಲ್ಲಿ ಅದನ್ನು ಕಟ್ಟಲೇಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಈಗಾಗಲೇ ಜಿಎಸ್‌ಟಿಗೆ ಬಡ್ಡಿ ಹಾಗೂ ದಂಡದಲ್ಲಿ ಸಾಕಷ್ಟು ವಿನಾಯಿತಿ ನೀಡಿದೆ. ಇದರ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್ ಹೇಳಿದ್ದಾರೆ.
ವ್ಯಾಪಾರಸ್ಥರು, ದಲಾಲಿ ವರ್ತಕರು, ಉದ್ಯಮಗಳನ್ನು ನಡೆಸುತ್ತಿರುವವರು ಹಾಗೂ ಬೆಳ್ಳಿ – ಬಂಗಾರದ ವರ್ತಕರು ಮುಂದಿನ ದಿನಗಳಲ್ಲಿ ತೆರಿಗೆಯನ್ನು ಪಾವತಿಸದೇ ಇದ್ದರೆ ಆದಾಯ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ವ್ಯಾಪಾರದ ಸ್ಥಳಗಳಿಗೆ ಭೇಟಿ ನೀಡಿ ವಹಿವಾಟಿನ ಪುಸ್ತಕ ಪರಿಶೀಲಿಸಿ ತೆರಿಗೆಯ ಜೊತೆ ದಂಡ ಹಾಗೂ ಬಡ್ಡಿ ಹಾಕುತ್ತಾರೆ. ಇದಕ್ಕೆ ಅವಕಾಶ ಕೊಡದೇ ತೆರಿಗೆ ಪಾವತಿಸುವುದೇ ಸೂಕ್ತ ಎಂದು ರಾಧೇಶ್ ಸಲಹೆ ನೀಡಿದ್ದಾರೆ.