ಹೊನ್ನಾಳಿ ರಾಂಪುರದ ಹಾಲಸ್ವಾಮೀಜಿ ಲಿಂಗೈಕ್ಯ

ಹೊನ್ನಾಳಿ ರಾಂಪುರದ ಹಾಲಸ್ವಾಮೀಜಿ ಲಿಂಗೈಕ್ಯ - Janathavaniಹೊನ್ನಾಳಿ, ಜು.15- ತಾಲ್ಲೂಕು ರಾಂಪುರ ಮಠಾಧೀಶರಾದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ (ಹಾಲ ಸ್ವಾಮೀಜಿ)  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದು ಸಂಜೆ ಲಿಂಗೈಕ್ಯರಾಗಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಶ್ರೀಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.

ತೀವ್ರ ರಕ್ತದೊತ್ತಡ, ಡಯಾಬಿಟಿಸ್ ನಿಂದ ಬಳಲುತ್ತಿದ್ದ ಶ್ರೀಗಳು, ಕೆಲವು ದಿನಗಳಿಂದ ಉಸಿರಾಟದ ತೊಂದರೆಗೊಳಗಾಗಿದ್ದರು.   ಭಕ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದ್ದರೂ ಸ್ವಾಮೀಜಿ ನಿರಾಕರಿಸಿದ್ದರು. ಎರಡು ದಿನಗಳ ಹಿಂದೆ ಶಿವಮೊಗ್ಗದ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದರು.

ಶ್ರೀಗಳಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು. ಮುಳ್ಳುಗದ್ದುಗೆ ಸ್ವಾಮೀಜಿ ಎಂದೇ   ಹೆಸರಾಗಿದ್ದರು. ವೀರಶೈವ ಪರಂಪರೆಯ ಪ್ರಮುಖ ಶ್ರೀಗಳಾಗಿದ್ದರು. ಹೊನ್ನಾಳಿ ತಾಲ್ಲೂಕಿನ ರಾಂಪುರ ಮಠ ಹಾಗೂ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದ ಗವಿಮಠದ ಪೀಠಾಧ್ಯಕ್ಷರಾಗಿದ್ದರು.  

ತ್ರಿವಿಧ ದಾಸೋಹಿ: ಧರ್ಮ, ಅನ್ನ, ಜ್ಞಾನ ಹೀಗೆ ತ್ರಿವಿಧ ದಾಸೋಹ ಮೂರ್ತಿಗಳೂ, ಹಾಲಸ್ವಾಮಿ ಬೃಹನ್ಮಠ ರಾಂಪುರದ 5ನೇ ಪಟ್ಟಾಧಿಕಾರ ಗುರುಗಳೂ ಆಗಿರುವ ಇವರು ಇದೇ ಮಠದ 4ನೇ ಗುರುಗಳಾದ ಶ್ರೀ ವಿಶ್ವಾರಾಧ್ಯ ಹಾಲಸ್ವಾಮಿಗಳು ಮತ್ತು ಗಿರಿಜಾಂಬ ಅವರಿಗೆ 1965ರ ಜುಲೈ 20 ರಂದು ಜನಿಸಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಸೇಂಟ್ ಥಾಮಸ್ ಕಾನ್ವೆಂಟ್‌ನಲ್ಲೂ, 8, 9ನೇ ತರಗತಿಯನ್ನು ಶಾರದಾ ವಿಲಾಸ ಹೈಸ್ಕೂಲ್‌ನಲ್ಲೂ, ಎಸ್ಸೆಸ್ಸೆಲ್ಸಿಯನ್ನು ಹೊನ್ನಾಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿದ್ದರು.

ಧಾರವಾಡದ ಮುರುಘಾ ಮಠದಲ್ಲಿದ್ದು ಕರ್ನಾಟಕ ಕಲಾ ಕಾಲೇಜಿನಲ್ಲಿ ಪಿಯುಸಿ ಓದಿ, ಭದ್ರಾವತಿಯ ಸರ್.ಎಂ.ವಿ. ಕಾಲೇಜಿನಲ್ಲಿ ಬಿಎ ಪೂರೈಸಿ, ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತ ಡಿಪ್ಲೋಮಾ ಅಭ್ಯಾಸ ಮಾಡಿ. ಶಿವಮೊಗ್ಗದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಎಲ್ಎಲ್‌ಬಿ ಸೇರಿ  ವ್ಯಾಸಂಗ ಮೊಟಕುಗೊಳಿಸಿ ಶ್ರೀಮಠದ ಉಸ್ತುವಾರಿಕೆ ವಹಿಸಿಕೊಂಡಿದ್ದರು.

ಸುಮಾರು 4 ವರ್ಷಗಳ ವರೆಗೆ ಶ್ರೀಮಠದ ಉಸ್ತುವಾರಿಕೆ ಮಾಡಿದ್ದ ಅವರು 1996, ಜನವರಿ 21ರಂದು  ಶ್ರೀಮಠದ ಪಟ್ಟಾಧಿಕಾರವನ್ನು ವಿದ್ಯುಕ್ತವಾಗಿ ಸ್ವೀಕರಿಸಿದ್ದರು. 

ಚೆನ್ನಬಸವ (ಪುಟ್ಟಸ್ವಾಮಿ) ಸ್ವಾಮಿಯಾಗಿದ್ದ ಅವರು ಶ್ರೀ ಷ.ಬ್ರ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಎಂಬ ಅಭಿನಾಮದಿಂದ ಸನ್ಯಾಸ ದೀಕ್ಷೆ ತೊಟ್ಟು 5ನೇ ಗುರುಗಳಾಗಿ ರಾಂಪುರ ಬೃಹನ್ಮಠದೊಂದಿಗೆ ಶಾಖಾ ಮಠಗಳಾದ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣದ ಗವಿಮಠ ಮತ್ತು ಹೊಳಲ್ಕೆರೆ ತಾಲ್ಲೂಕು ಗುಂಡೇರಿ ಹಾಲಸ್ವಾಮಿ ಮಠಗಳ ಅಧಿಕಾರ ಹೊಂದಿದ್ದರು.

 

error: Content is protected !!