ಸ್ವಚ್ಛತೆ ಕಾಣದ ಜೆ.ಹೆಚ್.ಪಟೇಲ್ ಬಡಾವಣೆ

ಹಾವುಗಳ ಹಾವಳಿಗೆ ಬೇಸತ್ತ ಜನತೆ : ಮೂಲ ಸೌಕರ್ಯಕ್ಕೆ ಆಗ್ರಹ

ದಾವಣಗೆರೆ, ಜು.14- ಅಲ್ಲಲ್ಲಿ ಗಿಡ ಗಂಟೆಗಳ ಸಾಲು, ಸಂಜೆಯಾಗುತ್ತಲೇ ಪ್ರತ್ಯಕ್ಷವಾಗುವ ಹಾವುಗಳು !

ಇದು ಯಾವುದೇ ಕಾಡಿನ ಕಥೆಯಲ್ಲ. ದಾವಣಗೆರೆಯನ್ನು ಜಿಲ್ಲೆಯನ್ನಾಗಿಸಿದ ಧೀಮಂತ ನಾಯಕ ದಿ. ಜೆ.ಹೆಚ್. ಪಟೇಲ್ ಅವರ ಹೆಸರನ್ನಿಟಿರುವ ಬಡಾವಣೆಯ ಚಿತ್ರಣವಿದು.

ಹೌದು, ಶಾಮನೂರು ಪಕ್ಕದಲ್ಲಿಯೇ ರೂಪು ತಾಳಿರುವ ಈ ಹೊಸ ಬಡಾವಣೆಯಲ್ಲಿ ಮನೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಮೂಲ ಸೌಲಭ್ಯಗಳ ಕೊರತೆ ಮಾತ್ರ ಆರಂಭದಿಂದಲೂ ಕಾಡುತ್ತಿದೆ.

ಅಲ್ಲಿನ ಜನರು ಸಂಜೆಯಾಗುತ್ತಲೇ ಮನೆ ಸೇರಬೇಕು. ರಾತ್ರಿ ಹೊರ ಬಂದರೆ ಪ್ರಾಣವನ್ನು ಪಣಕ್ಕಿಟ್ಟೇ ಬರಬೇಕು. ಕಾರಣ ಹಾವುಗಳ ಭಯ. ಕಾರಣ ಸ್ವಚ್ಚತೆ ಇಲ್ಲಿ ಮರೀಚಿಕೆ.

ಧೀಮಂತ ನಾಯಕನ ಹೆಸರನ್ನಿಟ್ಟಿರುವ ಈ ಬಡಾವಣೆಗೆ ಕನಿಷ್ಟ ಬೀದಿ ದೀಪದ ಬೆಳಕನ್ನೂ ಕರುಣಿಸದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇಲ್ಲಿನ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ. ಸಂಜೆಯಾಗುತ್ತಲೇ ಇಲ್ಲಿನ ನಿವಾಸಿಗಳು ಮನೆ ಸೇರಲೇಬೇಕು, ಇಲ್ಲದಿದ್ದರೆ ಕಷ್ಟ. ಒಂದೆಡೆ ಹಾವುಗಳ ಭಯ. ಮತ್ತೊಂದೆಡೆ ಕಳ್ಳಕಾಕರ ಭಯ. ಇತ್ತೀಚಿನ ದಿನಗಳಲ್ಲಿ ಸರಗಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವುದು ಇಲ್ಲಿನ ಮಹಿಳೆಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಪಟೇಲ್ ಬಡಾವಣೆಗೆ ಹೊಂದಿಕೊಂಡಂತೆ ಸುತ್ತ ಮುತ್ತಲಿನ ಬಡಾವಣೆಗಳು ಅಭಿವೃದ್ಧಿ ಹೊಂದುತ್ತಿವೆ. ವಾಸಕ್ಕೆ ಯೋಗ್ಯವಾಗಿರುವುದರಿಂದ ಇಲ್ಲಿನ ಸೈಟುಗಳಿಗೆ ಬೇಡಿಕೆಯೂ ಇದೆ. ಆದರೆ ಮೂಲ ಸೌಲಭ್ಯದ ಕೊರತೆ ಹೆಚ್ಚಾಗಿದೆ.

ಖಾಲಿ ಸೈಟುಗಳಲ್ಲಿ ಗಿಡ ಗಂಟೆಗಳು ಬೆಳೆದಿರುವುದು ಒಂದೆಡೆಯಾದರೆ, ರಸ್ತೆ ಬದಿಗಳಲ್ಲೂ ಗಿಡ ಗಂಟೆಗಳಿವೆ. ಸನಿಹದಲ್ಲಿಯೇ ತೋಟ, ಹೊಲಗಳು ಇರುವುದರಿಂದ ಹಾವುಗಳು ವಿರಾಜಮಾನವಾಗಿ ರಸ್ತೆಯಲ್ಲಿ ಓಡಾಡುತ್ತಿವೆ. ತಿಳಿದೋ ತಿಳಿಯದೆಯೋ ಹಾವುಗಳ ಮೇಲೆ ಕಾಲಿಟ್ಟರೆ ಸುಮ್ಮನೆ ಬಿಟ್ಟಾವೆಯೇ?

ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಡಾವಣೆಗೆ ಸ್ವಚ್ಚತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಇಲ್ಲಿನ ಸ್ಥಳೀಯರು ಅನಾಹುತಗಳಿಗೆ ತುತ್ತಾದರೆ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬಡಾವಣೆಯ ನಾಗರಿಕರು ಎಚ್ಚರಿಸಿದ್ದಾರೆ.

error: Content is protected !!