ರಾಣೇಬೆನ್ನೂರು, ಜು.14- ತಾಲ್ಲೂಕಿನ ತುಂಗಾ ಮೇಲ್ದಂಡೆ ಕಾಲುವೆಯನ್ನು ಸ್ವಚ್ಛಗೊಳಿಸಿ, ತ್ವರಿತಗತಿಯಲ್ಲಿ ನೀರು ಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ನೇತೃತ್ವದಲ್ಲಿ ರೈತರು ಆಗ್ರಹಿಸಿದರು.
ತುಂಗ ಭದ್ರಾ ನದಿ ತುಂಬಿದರೂ ಕೂಡ ಕಾಲುವೆಗೆ ನೀರು ಬಿಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರು ವುದು ಖೇದಕರ ಸಂಗತಿಯಾಗಿದೆ. ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ನದಿಯು ತುಂಬಿ ತುಳುಕುತ್ತಿದ್ದರೂ ಕೂಡ ಈ ಭಾಗದ ರೈತರನ್ನು ಉಳಿಸುವಂತಹ ಪ್ರಯತ್ನವನ್ನು ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ.
ತುಂಗಾ ಮೇಲ್ದಂಡೆ ಯೋಜನೆಯ ನೀರನ್ನೇ ನಂಬಿ ಜಿಲ್ಲೆಯ ರಾಣೇಬೆನ್ನೂರು, ಹಿರೇಕೆರೂರು, ಬ್ಯಾಡಗಿ ಹಾಗೂ ಹಾನಗಲ್ ತಾಲ್ಲೂಕಿನ ರೈತರು ಅಲ್ಪಸ್ವಲ್ಪ ಬಂದ ಮಳೆಯಿಂದಾಗಿ ಬಿತ್ತನೆ ಮಾಡಿದ್ದಾರೆ. ಆದರೇ ಅತ್ತ ಸರಿಯಾಗಿ ಮಳೆಯೂ ಆಗದೇ ಇತ್ತ ಕಾಲುವೆಗೆ ನೀರೂ ಇಲ್ಲದೆ, ಆಗಸದ ಕಡೆ ಮುಖ ಮಾಡಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಯಲ್ಲಿ ಹೂಳು ತುಂಬಿಕೊಂಡು ಗಿಡಗಂಟೆಗಳು ಬೆಳೆದು ನಿಂತು ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಹಿಂದೆ ಈ ಪ್ರತಿಭಟನೆ ನಡೆದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿರುವುದು ಒಂದೆಡೆಯಾದರೆ, ಯೋಜನೆ ಅವೈಜ್ಞಾನಿಕವಾಗಿರುವುದು ರೈತರ ಪಾಲಿನ ದುರ್ದೈವವೇ ಆಗಿದೆ. ಕೂಡಲೇ ಕಾಲುವೆಯ ಹೂಳು ತೆಗೆದು ಸ್ವಚ್ಛಗೊಳಿಸಿ, ತ್ವರಿತಗತಿಯಲ್ಲಿ ನೀರು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.