ಶಿಕ್ಷಕರು, ಉಪನ್ಯಾಸಕರ ಬೇಡಿಕೆ ಈಡೇರಿಸದಿದ್ದರೆ ಹೋರಾಟ

ದಾವಣಗೆರೆ, ಜು. 11- ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳಿಂದ  2.50 ಲಕ್ಷ ನೌಕರರು ಇದ್ದು, 15 ವರ್ಷಗಳಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ  ಕರ್ನಾಟಕ ರಾಜ್ಯ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳ ನೌಕರರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಸಿ. ಗೋಪಿನಾಥ್‌ ಎಚ್ಚರಿಸಿದರು.

ನಿನ್ನೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ ಈ ಕುರಿತು ಎಲ್ಲಾ ಸಂಘಟನೆಗಳ ಮುಖಂಡರು ಸಭೆ ನಡೆಸಿದ್ದೇವೆ. ಶೀಘ್ರ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಿಸುತ್ತೇವೆ ಎಂದು ಹೇಳಿದರು.

ಶಿಕ್ಷಕರಿಗೆ ವಿಮೆ ಜಾರಿಗೊಳಿಸಬೇಕು. ಅನುದಾನಿತ ಶಾಲಾ ಮಕ್ಕಳಿಗೂ ಶೂ, ಸಾಕ್ಸ್‌, ಬ್ಯಾಗ್‌, ನೋಟ್‌ ಪುಸ್ತಕ ನೀಡಬೇಕು. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಲ್ಲಿನ  ಖಾಲಿ ಹುದ್ದೆ ಭರ್ತಿ ಮಾಡಬೇಕು. ಪ್ರಾಥಮಿಕ ಶಾಲೆಗಳಲ್ಲಿ 40:1 ಅನುಪಾತದಂತೆ ಹಾಗೂ ಪ್ರೌಢಶಾಲೆಗಳಲ್ಲಿ ಕನಿಷ್ಠ 25, ಗರಿಷ್ಠ 50 ಮಕ್ಕಳ ದಾಖಲಾತಿಗೆ ಅವಕಾಶ ನೀಡಬೇಕು. ‘ಡಿ’ ಗ್ರೂಪ್‌ ನೌಕರರನ್ನು ಕಾಯಂಗೊಳಿಸಬೇಕು.  ಕಾಲ್ಪನಿಕ ವೇತನ ನಗದೀಕರಣಕ್ಕಾಗಿ ಬಸವರಾಜು ಹೊರಟ್ಟಿ ನೇತೃತ್ವದಲ್ಲಿ ಸದನ ಸಮಿತಿ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. 2006ರ ನಂತರ ನೇಮಕಗೊಂಡ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಂಚಾಲಕ ಹನುಮಂತಪ್ಪ, ‘ಶಿಕ್ಷಣ ಸಚಿವರು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವೇತನ ನೀಡಲು ಅನುದಾನಿತ ಶಿಕ್ಷಕರು ಎರಡು ದಿನಗಳ ವೇತನ ನೀಡಬೇಕು’ ಎಂಬ ಹೇಳಿಕೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದರು.

ಒಕ್ಕೂಟಕ್ಕೆ ಆಯ್ಕೆಯಾದ ಪದಾಧಿಕಾರಿಗಳು: ಕೆ.ಹನುಮಂತಪ್ಪ (ಗೌರವಾಧ್ಯಕ್ಷ), ಎಂ.ಪಿ.ಎಂ. ಷಣ್ಮುಖಯ್ಯ (ಕಾರ್ಯಾಧ್ಯಕ್ಷ), ಕೆ.ವೈ. ಹಡಗಲಿ, ಈಶಾನಾಯ್ಕ್‌ ಕೆ., ನಾಗರಾಜ್‌, ರಂಜನ್‌, ಶಿವಾನಂದ ಸ್ವಾಮಿ, ಎಸ್‌.ಎಸ್‌. ಪಾಟೀಲ, ಆರ್.ಎಚ್‌. ಪಾಟೀಲ, ಅಬ್ದುಲ್‌ ಖಾದರ್‌ (ಉಪಾಧ್ಯಕ್ಷ), ಎಸ್‌.ಎನ್‌. ಗಡದಿನ್ನಿ (ಕಾರ್ಯ ದರ್ಶಿ), ಟಿ.ರವಿಕುಮಾರ್‌ (ಖಜಾಂಚಿ).

error: Content is protected !!