ಜಗಳೂರು, ಜು.10- ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸ್ಥಿರಾಸ್ತಿ ಪತ್ರಗಳ ನೋಂದಣಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಕಳೆದ ನಾಲ್ಕು ದಿನಗಳಿಂದ ಕ್ರಯ, ದಾನ, ಬ್ಯಾಂಕುಗಳ ಆಧಾರ್ ಇತರೆ ಯಾವುದೇ ದಾಖಲೆಗಳ ನೋಂದಣಿ ನಡೆಯುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಕೋವಿಡ್-19 ಸಮಸ್ಯೆಗಳ ಮಧ್ಯೆಯೂ ಸರ್ಕಾರಕ್ಕೆ ಆದಾಯದ ಮೂಲವಾದ ನೋಂದಣಿ ಇಲಾಖೆಯ ಕಾರ್ಯ ಚಟುವಟಿಕೆ ಗಳಿಗೆ ಅನುಮತಿ ನೀಡಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಯಾವುದೇ ದಸ್ತಾವೇಜು ಗಳ ನೋಂದಣಿ ಆಗದೇ ಇರುವುದರಿಂದ ಸರ್ಕಾರಕ್ಕೂ ಆದಾಯದ ನಷ್ಟ ಉಂಟಾಗಿದೆ.
ರೈತರ ಬ್ಯಾಂಕುಗಳ ಆಧಾರ ಪತ್ರಗಳು, ಕ್ರಯ ಪತ್ರಗಳು ನೋಂದಣಿಯಾಗದೇ ಇರುವುದರಿಂದ ನಾಗರಿಕರು ಕಳೆದ ನಾಲ್ಕೈದು ದಿನಗಳಿಂದ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ.
ಕಚೇರಿಯ ಕಂಪ್ಯೂಟರ್ಗಳು ಡಾಟಾ ಬ್ಯಾಕಪ್ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ, ನೋಂದಣಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗಿದೆ. ಪರಿಣಿತರಿಂದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ಸಮಸ್ಯೆ ಪರಿಹಾರವಾಗುವ ಸಂಭವವಿದೆ ಎಂದು ಉಪ ನೋಂದಣಿ ಅಧಿಕಾರಿ ಎಸ್.ಎಂ.ಹೇಮೇಶ್ ಮಾಹಿತಿ ನೀಡಿದ್ದಾರೆ.