11 ಜನ ಬಿಡುಗಡೆ, 91 ಸಕ್ರಿಯ ಪ್ರಕರಣ
ದಾವಣಗೆರೆ, ಫೆ. 10 – ಜಿಲ್ಲೆಯಲ್ಲಿ ಶುಕ್ರವಾರ 21 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, 11 ಜನ ಇದೇ ದಿನ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.
ದಾವಣಗೆರೆ ನಗರದ ವಿದ್ಯಾನಗರ, ಸಿದ್ದೇಶ್ವರ ಬಡಾವಣೆ, ಕೆ.ಟಿ.ಜೆ. ನಗರ, ಬಾಷಾನಗರ, ಜಾಲಿನಗರ ಹಾಗೂ ಶಾಮನೂರುಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ತಾಲ್ಲೂಕಿನ ಆರನೇಕಲ್ಲಿನಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ.
ಹರಿಹರದ ಗಾಂಧಿನಗರ ಹಾಗೂ ಅಶೋಕ ಎಲೆಕ್ಟ್ರಾನಿಕ್ಸ್ ಬಳಿ ಸೋಂಕಿತರು ಕಂಡು ಬಂದಿದ್ದಾರೆ. ದಾವಣಗೆರೆ ನಗರದ ಏಳು, ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ ಇಬ್ಬರು ಹಾಗೂ ಚನ್ನಗಿರಿ ತಾಲ್ಲೂಕಿನ ನಲ್ಲೂರಿನ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೆಎಸ್ಸಾರ್ಟಿಸಿ ಉದ್ಯೋಗಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರಾಣೇಬೆನ್ನೂರಿನ ರೋಗಿಯೊಬ್ಬರು ದಾವಣಗೆರೆಗೆ ಚಿಕಿತ್ಸೆಗಾಗಿ ಬಂದಾಗ ಕೊರೊನಾ ಸೋಂಕು ಪತ್ತೆಯಾಗಿದೆ. ಹರಪನಹಳ್ಳಿಯ ಚಿಕ್ಕಮೇಗಳಗೆರೆ ವ್ಯಕ್ತಿಯೂ ಸಹ ದಾವಣಗೆರೆಗೆ ಬಂದಾಗ ಸೋಂಕು ಪತ್ತೆಯಾಗಿದೆ.
ಹರಿಹರದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್
ಹರಿಹರ ನಗರದಲ್ಲಿ ಇಂದು ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ತಿಳಿಸಿದರು.
ನಗರದ ಹರ್ಲಾಪುರ ಬಡಾವಣೆಯ ಬ್ಯಾಡಗಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ 48 ವರ್ಷದ ವ್ಯಕ್ತಿಗೆ ಮತ್ತು ಇಂದ್ರಾನಗರದ 42 ವರ್ಷದ ಮಹಿಳೆ ತನಗೆ ಅನಾರೋಗ್ಯ ಇರುವುದರಿಂದ ತಪಾಸಣೆ ಮಾಡಿಸಿಕೊಂಡಿದ್ದರಿಂದ ಕೊರೊನಾ ಸೋಂಕು ದೃಢಪಟ್ಟಿದೆ.
ಹರಿಹರ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 46 ಕ್ಕೆ ಏರಿದ್ದು ಇದರಲ್ಲಿ 22 ವ್ಯಕ್ತಿಗಳು ಗುಣಮುಖರಾಗಿದ್ದಾರೆ. 5187 ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಹಲವಾರು ವ್ಯಕ್ತಿಗಳ ವರದಿ ಬಂದಿದ್ದು, ಇನ್ನೂ ಬಾಕಿ ಉಳಿದ ವರದಿಗಳು ಶೀಘ್ರದಲ್ಲೇ ಬರಬಹುದು ಎಂದು ಹೇಳಿದರು. ನಗರದಲ್ಲಿ ಕಂಟೈನ್‌ಮೆಂಟ್ ಝೋನ್‌ಗಳು ಹೆಚ್ಚಾಗಿದ್ದು, ಸಿಬ್ಬಂದಿಗಳ ಕೊರತೆ ಇದೆ. ಆಶಾ ಕಾರ್ಯಕರ್ತೆಯರೂ ಸಹ ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆಯೂ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ತಡೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಡಾ. ವಿಶ್ವನಾಥ್ ಮಾತನಾಡಿ, ಈಗಾಗಲೇ ನಗರದ ಗುತ್ತೂರು ಗ್ರಾಮದ ಬಳಿ ಇರುವ ಹಾಸ್ಟೆಲ್ ಆವರಣದಲ್ಲಿ ಕ್ವಾರಂಟೈನ್ ನಲ್ಲಿ ಇದ್ದ ರಾಜನಹಳ್ಳಿ ಗ್ರಾಮದವರು ಮತ್ತು ನಗರದ ಎ.ಕೆ. ಕಾಲೋನಿಯಲ್ಲಿ ವಾಸವಾಗಿರುವ ಸುಮಾರು 46 ವ್ಯಕ್ತಿಗಳನ್ನು ಮನೆಗಳಿಗೆ ವಾಪಸ್ ಕಳಿಸಿಕೊಡಲಾಗಿದೆ. ಉಳಿದ 50 ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎ.ವಿ. ಹೊರಕೇರಿ, ಸುಧಾ, ಇತರರು ಹಾಜರಿದ್ದರು.