ಅನುದಾನ ತಾರತಮ್ಯ ನಿವಾರಿಸದಿದ್ದರೆ ಸಚಿವರಿಗೆ ಘೇರಾವ್
ದಾವಣಗೆರೆ, ಜು. 9- ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ ಎಂದು ಪಾಲಿಕೆ ಮೇಯರ್ ಬಿ.ಜೆ. ಅಜಯ್ ಕುಮಾರ್ ಮತ್ತೆ ಸುಳ್ಳು ಹೇಳಿಕೆಯನ್ನೇ ನೀಡಿದ್ದಾರೆ. 15 ದಿನದೊಳಗಾಗಿ ಅನುದಾನ ಹಂಚಿಕೆ ತಾರತಮ್ಯ ಸರಿಪಡಿಸದಿದ್ದರೆ ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಘೇರಾವ್ ಹಾಕುತ್ತೇವೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ರವಿಂದ್ರನಾಥ್ ಅವರ ಪುತ್ರಿಗೆ 5.50 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಕಾಂಗ್ರೆಸ್ ಸದಸ್ಯೆ ಆಶಾ ಉಮೇಶ್ ಪ್ರತಿನಿಧಿಸಿರುವ 15ನೇ ವಾರ್ಡ್ಗೆ ಕೇವಲ 50 ಲಕ್ಷ ರೂ. ಅನುದಾನ ನೀಡಲಾಗಿದೆ ಇದು ತಾರಮ್ಯವಲ್ಲದೇ ಮತ್ತೇನು? ಎಂದು ಪ್ರಶ್ನಿಸಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾಗಿರುವ ಎಸ್.ಸಿ.ಪಿ. ಹಾಗೂ ಟಿಎಸ್ಪಿ ಅನುದಾನವನ್ನು ವಾರ್ಡುಗಳಿಗೆ ನೀಡಿ ಹೆಚ್ಚಿನ ಅನುದಾನ ನೀಡಿರುವ ಲೆಕ್ಕವನ್ನು ಮೇಯರ್ ತೋರಿಸಿದ್ದಾರೆ. ಮೂರ್ನಾಲ್ಕು ವಾರ್ಡುಗಳಗೆ ಮಾತ್ರ ಹೆಚ್ಚು ಅನುದಾನ ನೀಡಿದ್ದಾಗಿ ಹೇಳಿದ್ದಾರೆ. ಉಳಿದ ವಾರ್ಡುಗಳಿಗೆ ತಾರತಮ್ಯ ಮಾಡಿರುವುದನ್ನು ಮರೆಮಾಚಿದ್ದಾರೆ ಎಂದರು.
ಕಾಂಗ್ರೆಸ್ನವರು ಪ್ರಚಾರಕ್ಕಾಗಿ ಆರೋಪ ಮಾಡುತ್ತಾರೆ ಎಂದು ಹೇಳಿದ್ದಾರೆ. ಆದರೆ ನೀವು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಿದ್ದರೆ ನಾವೇಕೆ ಕುಡಿಯುವ ನೀರು ಸರಬರಾಜು ಕೇಂದ್ರಗಳಿಗೆ ಹೋಗಬೇಕಾ ಗಿತ್ತು? ನಾವು ಹೋಗಿ ಪರಿಶೀಲಿಸಿದ ನಂತರ ಅವರು ಹೋಗಿದ್ದಾರೆ. ಕಡಿಮೆ ಸದಸ್ಯರಿದ್ದರೂ ವಾಮ ಮಾರ್ಗದಿಂದ ಅಧಿಕಾರ ಪಡೆದ ಬಿಜೆಪಿಯವರಿಗೆ ಅಧಿಕಾರದ ಮೋಹ ಹಾಗೂ ಪ್ರಚಾರದ ಗೀಳು ಇರುವುದು ಎಂದು ತಿರುಗೇಟು ನೀಡಿದರು.
ದಕ್ಷಿಣ ಭಾಗಕ್ಕೆ ಸ್ಮಾರ್ಟ್ ಸಿಟಿ ಅನುದಾನ ಇರುವುದರಿಂದ ಉತ್ತರ ಭಾಗದ ವಾರ್ಡುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿರುವುದಾಗಿ ಹೇಳಲಾಗಿದೆ. ಆದರೆ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಏನು ಎಂಬುದರ ಬಗ್ಗೆ ಮೇಯರ್ ಮೊದಲು ತಿಳಿದುಕೊಳ್ಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವರಮನೆ ಶಿವಕುಮಾರ್, ಅಬ್ದುಲ್ ಲತೀಫ್, ಉಮೇಶ್, ಜಾಕಿರ್ ಅಲಿ, ಕಬೀರ್, ಜೆ.ಡಿ. ಪ್ರಕಾಶ್, ಗಡಿಗುಡಾಳ್ ಮಂಜುನಾಥ್, ಉದಯ ಕುಮಾರ್, ಕಲ್ಲಳ್ಳಿ ನಾಗರಾಜ್, ಇಟ್ಟಿಗುಡಿ ಮಂಜುನಾಥ್, ಎ.ಬಿ. ರಹೀಂ, ಗಣೇಶ್ ಹುಲ್ಮನಿ ಉಪಸ್ಥಿತರಿದ್ದರು.