ದಾವಣಗೆರೆ ಅ.10 – ದಾವಣಗೆರೆ ಜಿಲ್ಲೆಯಾದ್ಯಂತ ಸುಮಾರು 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು, ಭತ್ತದ ಬೆಳೆಯು ಬೆಳವಣಿಗೆ ಹಂತದಿಂದ ತೆಂಡೆ ಒಡೆಯುವ ಹಂತದಲ್ಲಿದ್ದು, ಕೆಲ ಪ್ರದೇಶಗಳಲ್ಲಿ ದುಂಡಾಣು ಅಂಗಮಾರಿ ರೋಗದ ಬಾಧೆಯು ಕಾಣಿಸಿಕೊಂಡಿದೆ. ಈ ರೋಗವು ಕ್ಸಾಂತೊಮೊನಾಸ್ ಒರಿಝೆ (Xanthomonas oryzae) ಎಂಬ ದುಂಡಾಣುವಿನಿಂದ (ಬ್ಯಾಕ್ಟೀರಿಯಾ) ಹರಡುವುದು.
ರೋಗದ ಲಕ್ಷಣಗಳು: ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡು ಬರುತ್ತವೆ. ನಂತರದ ಹಂತದಲ್ಲಿ ಎಲೆಗಳು ಪೂರ್ತಿಯಾಗಿ ಒಣಗಿದಂತಾಗುತ್ತದೆ.
ನಿರ್ವಹಣಾ ಕ್ರಮಗಳು: ಗೋಣಿ ಚೀಲದಲ್ಲಿ ಸಗಣಿಯನ್ನು ಹಾಕಿ ಕಟ್ಟಿ, ನೀರು ಹಾಯಿಸುವ ಜಾಗದಲ್ಲಿ ಇಡುವುದರಿಂದ ನೀರಿನ ಜೊತೆಯಲ್ಲಿ ಹರಿಯುವ ಸಗಣಿ ರಾಡಿಯಿಂದ ಈ ರೋಗವನ್ನು ನಿರ್ವಹಣೆ ಮಾಡ ಬಹುದು. ಸ್ಟ್ರೆಪ್ಟೋಸೈಕ್ಲಿನ್ 0.5 ಗ್ರಾಂ. ಮತ್ತು ತಾಮ್ರದ ಆಕ್ಸಿಕ್ಲೋರೈಡ್ 2.15 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ತಿಳಿಸಿದ್ದಾರೆ.