ಮಲೇಬೆನ್ನೂರು, ಅ.10- ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಹೊಸ ಮೀಸಲಾತಿ ನಿಗದಿ ಮಾಡಿ ಆದೇಶ ಹೊರಡಿಸಿರುವುದು ಆಕಾಂಕ್ಷಿಗಳು ನಿರುತ್ಸಾಹ ತೋರುವಂತೆ ಮಾಡಿದೆ. ಈ ಹಿಂದೆ ಅಧ್ಯಕ್ಷ ಸ್ಥಾನವನ್ನು ಬಿಸಿಎಂ `ಎ’ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಎಸ್ಸಿ ಮಹಿಳೆಗೆ ಮೀಸಲು ಮಾಡಿದ್ದ ಸರ್ಕಾರ ಇದೀಗ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ನಿಗದಿ ಮಾಡಿದೆ.
ಇಲ್ಲಿನ ಪುರಸಭೆಯಲ್ಲಿ ಒಟ್ಟು 23 ಜನ ಸದಸ್ಯರಿದ್ದು, 12 ಮಹಿಳೆಯರು ಮತ್ತು 11 ಜನ ಪುರುಷ ಸದಸ್ಯರಿದ್ದಾರೆ.
ಕಾಂಗ್ರೆಸ್ 9, ಬಿಜೆಪಿ 7, ಜೆಡಿಎಸ್ 5 ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದು, ಸದ್ಯ ಪುರಸಭೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಈ ಹಿಂದಿನ ಎರಡೂವರೆ ವರ್ಷ ಅಧಿಕಾರ ನಡೆಸಿದ್ದರು. ಇದೀಗ ಹೊಸ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ 3 ಪಕ್ಷಗಳಿಂದ 12 ಜನ ಮಹಿಳೆಯರು ಸಹಜವಾಗಿಯೇ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಮಹಿಳೆಯರು ಮಾತ್ರ ಇದ್ದಾರೆ.
ಈ ಹಿಂದಿನ ಹೊಂದಾಣಿಕೆ ಪ್ರಕಾರ ಈಗ ಅಧ್ಯಕ್ಷ ಸ್ಥಾನ ಬಿಜೆಪಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಸಿಗಲಿದೆ. ಬಿಜೆಪಿಯಲ್ಲಿ ಮೂವರು ಮತ್ತು ಜೆಡಿಎಸ್‌ನಲ್ಲಿ ಮೂವರು ಮಹಿಳೆಯರಿದ್ದು, ಕಾಂಗ್ರೆಸ್‌ನಲ್ಲಿ 6 ಜನ ಮಹಿಳೆಯರಿದ್ದಾರೆ.
ಕಡಿಮೆ ಅವಧಿ-ನಿರುತ್ಸಾಹ : ಪುರಸಭೆಯ ಪ್ರಥಮ ಸಭೆ ನಡೆದ ದಿನಾಂಕದ ಆಧಾರದ ಮೇಲೆ ಹೇಳುವುದಾದರೆ ಈಗಿನ ಸದಸ್ಯರ ಅವಧಿ 7-8 ತಿಂಗಳು ಮಾತ್ರ ಇದೆ ಎನ್ನಲಾಗುತ್ತಿದೆ.
7-8 ತಿಂಗಳ ಅಧಿಕಾರಕ್ಕಾಗಿ ದುಡ್ಡು ಖರ್ಚು ಮಾಡಿ ಅಧಿಕಾರ ಪಡೆಯಲು ಆಕಾಂಕ್ಷಿಗಳು ನಿರುತ್ಸಾಹ ತೋರುವುದು ಕಂಡುಬಂದಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಹೊಸ ಮೀಸ ಲಾತಿ ನಿಗದಿ ನಂತರ ಆಕಾಂಕ್ಷಿಗಳಲ್ಲಿ ಉತ್ಸಾಹ ಕಾಣುತ್ತಿಲ್ಲ.
ಅವಿರೋಧ ಆಯ್ಕೆಗೆ ಒತ್ತು : ಕಡಿಮೆ ಅವಧಿ ಇರುವುದರಿಂದ ಸದಸ್ಯರೆಲ್ಲರೂ ಒಟ್ಟಾಗಿ ಅವಿರೋಧ ಆಯ್ಕೆಗೆ ಒತ್ತು ಕೊಡಬಹುದೆಂದು ಹೇಳಲಾಗುತ್ತಿದೆ.
ಬಿಜೆಪಿ-ಜೆಡಿಎಸ್ ಹಿಂದಿನ ತೀರ್ಮಾನದಂತೆ ನಡೆ ದುಕೊಂಡರೆ ಅಧ್ಯಕ್ಷ ಸ್ಥಾನ ಬಿಜೆಪಿಗೆ ಸಲೀಸಾಗಿ ಸಿಗಲಿದೆ. ಆಗ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುತ್ತದೆ.
2 ವರ್ಷ ಖಾಲಿ : ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಕಳೆದ 2 ವರ್ಷಗಳಿಂದ ಖಾಲಿ ಇದ್ದು, ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು.
ಈ ಹಿಂದೆ ಎರಡೂವರೆ ವರ್ಷ ಜೆಡಿಎಸ್‌ನ ಅಂಜಿನಮ್ಮ ವಿಜಯಕುಮಾರ್ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಬಿ.ಎನ್. ಚನ್ನೇಶ್ ಸ್ವಾಮಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.