ಪಾಲಿಕೆ ಅನುದಾನದಲ್ಲಿ ತಾರತಮ್ಯ

ಪಾಲಿಕೆ ಅನುದಾನದಲ್ಲಿ ತಾರತಮ್ಯ - Janathavaniಪಾಲಿಕೆಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕಾಂಗ್ರೆಸ್ಎಚ್ಚರಿಕೆ

ದಾವಣಗೆರೆ, ಜು. 7-  ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಎಂ.ಜಿ.ಎನ್.ವಿ.ವೈ)ಯಡಿ 2019-20 ರಿಂದ 2023-24ರವರೆಗೆ 4 ವರ್ಷಗಳ ಅವಧಿಗೆ 125 ಕೋಟಿ ರೂ. ಮಂಜೂರಾಗಿದೆ. ಆದರೆ ಅನುದಾನವನ್ನು ಎಲ್ಲಾ ವಾರ್ಡುಗಳಿಗೆ ಸಮಾನವಾಗಿ ಹಂಚದೆ, ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ವಿಪಕ್ಷ ಸದಸ್ಯರು,  ಕೂಡಲೇ ಸರ್ಕಾರದ ಕಾರ್ಯದರ್ಶಿಗಳು ಕ್ರಿಯಾ ಯೋಜನೆಗೆ ಮಂಜೂರಾತಿ ತಡೆ ಹಿಡಿದು, 15 ದಿನದೊಳಗೆ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಾಲಿಕೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 125 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ಸಿಕ್ಕಿತ್ತು. ನಂತರ ಯಡಿಯೂರಪ್ಪನವರ ಆಡಳಿತದ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿದೆ. ಆದರೆ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಿಗೆ ಅನುದಾನ ಸಮಾನವಾಗಿ ಹಂಚಿಕೆಯಾಗಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

ಬಿಜೆಪಿಯ 17 ಸದಸ್ಯರು ಹಾಗೂ 4 ಸ್ವತಂತ್ರ ಅಭ್ಯರ್ಥಿಗಳ ವಾರ್ಡು ಸೇರಿ ಒಟ್ಟು 21 ವಾರ್ಡುಗಳಿಗೆ 51 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಲಾಗಿದೆ. ಆದರೆ ಕಾಂಗ್ರೆಸ್‌ನ 22 ಸದಸ್ಯರ ವಾರ್ಡುಗಳಿಗೆ ಕೇವಲ 20 ಕೋಟಿ ರೂ. ಅನುದಾನ ನೀಡಲಾಗಿದೆ.

ಶಾಸಕ ಎಸ್.ಎ. ರವೀಂದ್ರನಾಥ್ ಪುತ್ರಿ ಪ್ರತಿನಿಧಿಸುವ ಪ್ರತಿಷ್ಠಿತ ಬಡಾವಣೆಗೆ 5.15 ಕೋಟಿ ರೂ. ಅನುದಾನ ನೀಡಲಾಗಿದೆ. ಈಗಾಗಲೇ ಅಭಿವೃದ್ಧಿ ಹೊಂದಿರುವ ಮೇಯರ್ ಅಜಯ್ ಕುಮಾರ್ ಅವರ ಪಿ.ಜೆ. ಬಡಾವಣೆಗೆ 2.60 ಕೋಟಿ ರೂ., 24ನೇ ವಾರ್ಡ್‌ನ ಪ್ರಸನ್ನ ಅವರ ವಾರ್ಡ್‌ಗೆ 2.55 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸಿರುವ, ಸ್ಲಂ ಗಳೇ ಹೆಚ್ಚಾಗಿರುವ ವಾರ್ಡುಗಳಿಗೆ ಕೇವಲ 30, 40, 50 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಕ್ರಿಯಾ ಯೋಜನೆಗೆ ಅನುಮೋದನೆ ನೀಡದಂತೆ ಈಗಾಗಲೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸದಸ್ಯರೆಲ್ಲರೂ ಸೇರಿ ಕಾರ್ಯದರ್ಶಿಗಳಿಗೆ ಮತ್ತೊಂದು ಪತ್ರ ಬರೆದು ಕ್ರಿಯಾ ಯೋಜನೆಗೆ ಅನುಮೋದನೆ ನೀಡದಂತೆ ಒತ್ತಾಯಿಸಲಾಗುವುದು ಎಂದರು.

ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಮಾತನಾಡಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಲ್ಲದ ಸಮಯದಲ್ಲಿ ತರಾತುರಿಯಲ್ಲಿ ಸಭೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದನ್ವಯ ಸಭೆ ನಡೆಸಲಾಗಿದೆ ಎನ್ನುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಬಿಜೆಪಿ ಶಾಸಕರು ಪ್ರಬುದ್ಧ ರಾಜಕಾರಣಿಗಳು. ಆದರೂ ಈ ರೀತಿ ಮಲತಾಯಿ ಧೋರಣೆ ನಡೆಸುತ್ತಿರುವುದು ಸರಿಯೇ? ಈಗಲೂ ಕಾಲ ಮಿಂಚಿಲ್ಲ. ಪುನಃ ಸಭೆ ಕರೆದು ಎಲ್ಲಾ ವಾರ್ಡುಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಿ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಲತೀಫ್, ಮಂಜುನಾಥ್ ಗಡಿಗುಡಾಳ್, ಸಯ್ಯದ್ ಚಾರ್ಲಿ, ಉದಯ್‌ಕುಮಾರ್, ಉಮೇಶ್, ಪಾಮೇನಹಳ್ಳಿ ನಾಗರಾಜ್, ಇಟ್ಟಿಗುಡಿ ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!