ದಾವಣಗೆರೆ, ಜು. 4 – ಕೊರೊನಾ ವೆಚ್ಚಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಲು ಸಿದ್ಧ ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು, ಕಾಂಗ್ರೆಸ್ ಮಾಹಿತಿ ಹಕ್ಕು ಅರ್ಜಿಯಡಿ ವಿವರ ಪಡೆದು ತನಿಖೆ ನಡೆಸಿಕೊಳ್ಳಲಿ ಎಂದು ಸವಾಲೆಸೆದಿದ್ದಾರೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಕುಣಿಯಲು ಬಾರದವನು ನೆಲ ಡೊಂಕು ಎಂದಂತೆ ಸಿದ್ದರಾಮಯ್ಯ ಅವರು ಆರೋಪ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಸಚಿವರು, ಅವರಲ್ಲಿ ಶಕ್ತಿ ಇದ್ದರೆ ತನಿಖೆ ಮಾಡಲಿ. ನಾವು ತನಿಖೆಗೆ ಸಿದ್ಧ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಅನುಭವ ಹೊಂದಿರುವವರು. ಅವರು ಈ ರೀತಿ ಆಧಾರ ರಹಿತ ಆರೋಪ ಮಾಡಬಾರದು. ಆದರೆ, ಅವರು ಪ್ರಚಾರಕ್ಕಾಗಿ ಆರೋಪ ಮಾಡುತ್ತಿದ್ದಾರೆ. ನಾವು ಮಾಡಿರುವ ಪ್ರತಿ ಪೈಸೆ ವೆಚ್ಚಕ್ಕೂ ಲೆಕ್ಕ ಇದೆ ಎಂದು ಶ್ರೀರಾಮುಲು ಹೇಳಿದರು.
ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಹಲವಾರು ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈ ಜೋಡಿಸಿವೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ದೂರ ಇದ್ದಾರೆ. ಅವರು ಕೂಡ ಸರ್ಕಾರದ ಜೊತೆ ಕೈ ಜೋಡಿಸಬೇಕು. ಅದನ್ನು ಬಿಟ್ಟು ಈ ರೀತಿಯ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದು ಸಚಿವರು ತಿಳಿಸಿದರು. ಕೊರೊನಾ ತಡೆಗಾಗಿ ಕರ್ನಾಟಕ ತೆಗೆದುಕೊಂಡ ಕ್ರಮಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಕೊರೊನಾ ನಿಯಂತ್ರಿಸಿದ ರೀತಿಗಾಗಿ ಇಡೀ ವಿಶ್ವವೇ ಭಾರತವನ್ನು ಮೆಚ್ಚಿದೆ ಎಂದವರು ಸಮರ್ಥಿಸಿಕೊಂಡರು.
ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳದ ನಿರ್ಧಾರ : ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಹೆಚ್ಚಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ವರದಿ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ಮುಗಿದ ನಂತರ ಸರ್ಕಾರ ನಿರ್ಧಾರ ತಗೆದುಕೊಳ್ಳಲಿದೆ ಎಂದಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಆಯೋಗ ಮಹತ್ವದ ವರದಿ ನೀಡಿದೆ. ಮೀಸಲಾತಿ ಹೆಚ್ಚಿಸದೇ ಇದ್ದರೆ ರಾಜೀನಾಮೆ ನೀಡುವುದಾಗಿಯೂ ಶ್ರೀರಾಮುಲು ಈ ಹಿಂದೆ ಹೇಳಿಕೆ ನೀಡಿದ್ದರು.
ಅನ್ಯ ರಾಜ್ಯಗಳಿಂದ ಬಂದವರಿಂದ ಕೊರೊನಾ ಉಲ್ಬಣ : ಭೈರತಿ ಬಸವರಾಜ್
ದಾವಣಗೆರೆ, ಜು. 4 – ಅನ್ಯ ರಾಜ್ಯಗಳಿಂದ ಬಂದವರಿಂದ ರಾಜ್ಯದಲ್ಲಿ ಕೊರೊನಾ ಉಲ್ಬಣಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಲಾಕ್ಡೌನ್ ಸಡಿಲಿಕೆಯ ನಂತರ ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್ ಸೇರಿದಂತೆ ಹೊರ ರಾಜ್ಯಗಳಿಂದ ಜನರು ಇಲ್ಲಿಗೆ ಬಂದಿದ್ದಾರೆ. ಇದತರಿಂದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ ಎಂದವರು ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯ ಇದೆ. ಈ ಬಗ್ಗೆ ನಿನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಲಾಗಿದೆ ಎಂದವರು ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈಗ ಸುಮಾರು 45 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕೊರೊನಾ ತಡೆಗಟ್ಟಲು ವೈದ್ಯಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳಿಗೆ ತಿಳಿಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿ ಶಿಷ್ಯವೇತನಕ್ಕೆ ಎಸ್ಸೆಸ್ ಸಮ್ಮತಿ
ಜೆ.ಜೆ.ಎಂ.ಸಿ. ನಿವಾಸಿ ವೈದ್ಯಕೀಯ ವಿದ್ಯಾರ್ಥಿಗಳ 16 ತಿಂಗಳ ಬಾಕಿ ಶಿಷ್ಯವೇತನವನ್ನು ಪಾಲಿಸಲು ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಯೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ನಡೆಸಲಾದ ಸಭೆಯಲ್ಲಿ ಈ ಬಗ್ಗೆ ಅವರು ಸಮ್ಮತಿಸಿದ್ದಾರೆ ಎಂದು ಹೇಳಿದರು.
ಸೋಮವಾರದಿಂದ ಶಿಷ್ಯ ವೇತನ ನೀಡುವುದಾಗಿ ಅವರು ಹೇಳಿದ್ದಾರೆ ಎಂದ ಬಸವರಾಜ್, ಇಡೀ ರಾಜ್ಯಕ್ಕೆ ಒಂದೇ ರೀತಿಯ ನೀತಿ ಇರಬೇಕು. ಹೀಗಾಗಿ ಶಿಷ್ಯ ವೇತನವನ್ನು ಕಾಲೇಜುಗಳೇ ಪಾವತಿಸಬೇಕು ಎಂದರು.
ಟೆಸ್ಟ್ನಲ್ಲಿ ಮೂರನೇ ಸ್ಥಾನ : ಕೊರೊನಾ ಪರೀಕ್ಷೆ ನಡೆಸುವಲ್ಲಿ ಕರ್ನಾಟಕ ಈಗ ಭಾರತದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಪರೀಕ್ಷೆಯ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಇದರ ಜೊತೆಗೆ ಚಿಕಿತ್ಸೆಗೂ ಹೆಚ್ಚಿನ ಕ್ರಮ ತೆಗೆದುಕೊಳ್ಳಾಗುತ್ತಿದೆ ಎಂದವರು ಹೇಳಿದ್ದಾರೆ
ಸಚಿವರೆಲ್ಲ ಫ್ರೆಂಡ್ಸ್ : ಕೊರೊನಾ ವಿರುದ್ಧದ ಹೋರಾಟದಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಶ್ರೀರಾಮುಲು, ನಾವು ಸಚಿವೆರಲ್ಲ §ಫ್ರೆಂಡ್ಸ್’. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ನೇತೃತ್ವದಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ.
ಸರ್ಕಾರಿ ಆಸ್ಪತ್ರೆಯ ರೆಫರೆನ್ಸ್ ಪಡೆಯಿರಿ : ಕೊರೊನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುಂಚೆ ಸರ್ಕಾರಿ ಆಸ್ಪತ್ರೆಯ ರೆಫರೆನ್ಸ್ ಪಡೆಯುವಂತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಲಹೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದಾಗ ಪ್ರವೇಶ ನಿರಾಕರಿಸುವ ಸಾಧ್ಯತೆ ಇರುತ್ತದೆ. ಅದೇ ಸರ್ಕಾರಿ ಆಸ್ಪತ್ರೆಯ ರೆಫರೆನ್ಸ್ ಪಡೆದ ನಂತರ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಲಾಗದು ಎಂದವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಮಾಡಾಳ್ ವಿರೂಪಾಕ್ಷಪ್ಪ, ಮೇಯರ್ ಅಜಯ್ ಕುಮಾರ್, ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.