ಹರಪನಹಳ್ಳಿ, ಜು.6- ಪಟ್ಟಣದ ಬಿಎಸ್ಸೆನ್ನೆಲ್ ದೂರ ವಾಣಿ ಕೇಂದ್ರದಿಂದ ಗ್ರಾಹಕರಿಗೆ ಸೇವೆ ಇಲ್ಲದೇ ಪರದಾಡುತ್ತಿದ್ದಾರೆ. ದೂರು ಸಲ್ಲಿಸಿ ಪರಿಹಾರ ಕೇಳಲು ಕಛೇರಿಗೆ ಹೋದರೆ ಅಲ್ಲಿ ನರ ಪಿಳ್ಳೆಯೂ ಇರುವುದಿಲ್ಲ. ಪ್ರವೇಶ ಮಾರ್ಗದ ಗೇಟ್ ಮೊದಲ ಮಾಡಿ ಚಿಲಕ ಹಾಕಿರುತ್ತಾರೆ. ಅಲ್ಲದೇ ಅಧಿಕಾರಿಗಳ ಕೊಠಡಿಗಳಿಗೆ ಬೀಗ ಜಡಿಯಲಾಗಿದೆ.
ಸ್ಥಿರ ದೂರವಾಣಿಗಳ ದುರಸ್ಥಿ ಹಾಗೂ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳ ಬಗ್ಗೆ ಗ್ರಾಹಕರು ರೋಸಿ ಹೋಗಿದ್ದಾರೆ. ಕಾಟಾಚಾ ರಕ್ಕಾದರೂ ಕಛೇರಿಯಲ್ಲಿ ಒಬ್ಬ ಸಿಬ್ಬಂದಿಗಳು ಇರುವುದಿಲ್ಲ. ಬಿಲ್ ಕಟ್ಟಲು ಆಗಮಿಸಿದ ಗ್ರಾಹಕರಿಗೂ ಸೇವ ಕೇಂದ್ರ ಮುಚ್ಚಿರುತ್ತದೆ. ಬ್ಯಾಂಕ್, ಸರ್ಕಾರಿ ಕಛೇರಿಗಳಲ್ಲಿ ಬಿಎಸ್ಸೆನ್ನೆಲ್ ದೂರ ವಾಣಿಗಳ ಸಂಪರ್ಕ ಸಮಸ್ಯೆ, ನೆಟ್‍ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇರುವ ಬೆರಳೆಣಿಕೆಯ ದೂರವಾಣಿ ಗಳ ಬಗ್ಗೆ ಕಾಳಜಿ ವಹಿಸಲು ನಿರ್ಲಕ್ಷ ತಾಳಿರುವ ದೂರವಾಣಿ ಸಿಬ್ಬಂದಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇ ಎಂದು ಗ್ರಾಹಕರು ಅಳಲು ತೊಡಿಕೊಳ್ಳುತ್ತಿದ್ದಾರೆ.
ಇನ್ನೂ ಮೊಬೈಲ್ ಗ್ರಾಹಕರ ಗೋಳು ಕೇಳಿದರೆ ಅಯೋಮಯವಾಗಿದೆ. ಕಾಲ್ ಮಾಡಿದರೆ ನೆಟ್‍ವರ್ಕ್ ಸಂಪರ್ಕ ಸಾಧಿಸಲು ಹಲವಾರು ನಿಮಿಷಗಳೇ ಬೇಕು. ಬೇರೆ ನೆಟ್ ವರ್ಕ್‍ಗಳಿಂದ ಬಿಎಸ್ಸೆನ್ನೆಲ್ ಸಂಪರ್ಕ ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದರೆ ಮಾತ್ರ ದೊರೆಯುತ್ತದೆ. ಕೆಲವೊಂದು ಸಾರಿ ಗಂಟೆಗಟ್ಟಲೇ ಸಂಪರ್ಕವಿಲ್ಲದೇ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಕೇಂದ್ರ ಯಾರ ಉದ್ದಾರಕ್ಕೆ ಇರುವುದು ಎನ್ನುವುದು ತಿಳಿಯುತ್ತಿಲ್ಲ. ಇಲ್ಲಿಯ ಅಧಿಕಾರಿಗಳ ಸಂಬಳಕ್ಕಾಗಿ ಈ ಕಛೇರಿಯಿರುವುದೇ ಎಂದು ಗ್ರಾಹಕರು ಪ್ರಶ್ನಿಸುತ್ತಾರೆ.
ಇನ್ನಾದರೂ ಮೇಲಾಧಿಕಾರಿಗಳು ಹರಪನಹಳ್ಳಿ ಬಿಎಸ್ಸೆನ್ನೆಲ್ ಗ್ರಾಹಕರ ಬಗ್ಗೆ ಕರುಣೆ ತೋರಿಸುತ್ತಾರೋ ಕಾದು ನೋಡಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಬಳ್ಳಾರಿ ಬಿಎಸ್ಸೆನ್ನೆಲ್ ಅಧಿಕಾರಿ ಜಿಎಂ ಆಶೋಕ ನಾಯಕ ಅವರು ಪತ್ರಿಕೆಯೊಂದಿಗೆ ಮಾತನಾಡಿ ಶೀಘ್ರದಲ್ಲೇ ಸಮಸ್ಯೆ ಗಳಿಗೆ ಪರಿಹಾರ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.