ದಾವಣಗೆರೆ, ಜು. 6 – ಜಿಲ್ಲೆಯಲ್ಲಿ ಸೋಮವಾರ ಮೂರು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಹತ್ತು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದೇ ದಿನ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಭಾರತಿ ನಗರದಿಂದ ಜಿಲ್ಲೆಗೆ ಬಂದಿದ್ದ 49 ವರ್ಷದ ಪುರುಷರೊಬ್ಬರು ಕೊರೊನಾಗೆ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕಳೆದ ಜೂನ್ 30ರಂದು ಇವರು ಜ್ವರ, ನೆಗಡಿ ಹಾಗೂ ಕೆಮ್ಮಿನ ಸಮಸ್ಯೆಯಿಂದಾಗಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ಪತ್ತೆಯಾ ಗಿತ್ತು. ಅನಿಯಂತ್ರಿತ ಸಕ್ಕರೆ ಕಾಯಿಲೆ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದ ಇವರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಆಂಧ್ರ ಪ್ರದೇಶದಿಂದ ರಾಯದುರ್ಗದಿಂದ ನಗರಕ್ಕೆ ಚಿಕಿತ್ಸೆಗಾಗಿ ಬಂದಿದ್ದ 63 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರು ಮೊದಲು ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಇರುವುದು ಟೆಸ್ಟ್‌ನಿಂದ ದೃಢಪಟ್ಟ ನಂತರ ನಗರದ ಸಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಗಿರಿಯ ಮರಬನಹಳ್ಳಿ ಹಾಗೂ ಹರಿಹರದ ಇಂದಿರಾ ನಗರದ ತಲಾ ಒಬ್ಬರಲ್ಲಿ ಕೊರೊನಾ ಸೋಂಕಿರುವುದು ಕಂಡು ಬಂದಿದೆ.
ಇದೇ ದಿನದಂದು ಹತ್ತು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ದಾವಣಗೆರೆಯ ತರಳಬಾಳು ಬಡಾವಣೆಯ ಇಬ್ಬರು, ಆವರಗೆರೆ, ನಿಟುವಳ್ಳಿ ಹಾಗೂ ಬಿಲಾಲ್ ಕಾಂಪೌಂಡ್ ನಿವಾಸಿಗಳಾಗಿರುವ ತಲಾ ಒಬ್ಬರು ಸೇರಿದ್ದಾರೆ. ದಾವಣಗೆರೆ ತಾಲ್ಲೂಕಿನ ನೇರ್ಲಿಗೆಯ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ.
ಹೊನ್ನಾಳಿಯ ದೊಡ್ಡೇರಿ, ಕ್ಯಾಸಿನಕೆರೆ ಹಾಗೂ ಚಿನ್ನಿಕಟ್ಟೆಯ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಚನ್ನಗಿರಿಯ ರಾಜಗೊಂಡನಹಳ್ಳಿಯ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಇಳಿಕೆಯಾಗಿದೆ.