ಹರಪನಹಳ್ಳಿ, ಜು.5- ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಕಾಲದಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸದೃಢವಾಗಿದ್ದ ಕಾಂಗ್ರೆಸ್ ಇದೀಗ ಕೆಲವರ ಹಸ್ತಕ್ಷೇಪದಿಂದ ಭಿನ್ನಮತ ಆರಂಭವಾಗಿ ಬಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲಿದೆ.
ಡಿ.ಕೆ.ಶಿವಕುಮಾರ್ ಪದಗ್ರಹಣ ಸಂದರ್ಭದಲ್ಲಿ ನಾಲ್ಕನೇ ಬಣ ಹುಟ್ಟಿದೆ. ಆದರೂ ಹೊರಗಿನ ಜನಪ್ರತಿನಿಧಿಯೊಬ್ಬರು ಇಲ್ಲಿಯ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ ಎಂದು ಸತ್ಯದ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತಿದ್ದಾರೆ.
ಎಸ್ಸಿ ಮೀಸಲಾತಿ ಬದಲಾಗಿ ಸಾಮಾನ್ಯ ಕ್ಷೇತ್ರವಾದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಪ ರೂಪದ ರಾಜಕಾರಣಿ ದಿ|| ಎಂ.ಪಿ.ಪ್ರಕಾಶ್ ಪರಾಭವಗೊಂಡರು. ಆಗ ಅವರ ಪುತ್ರ ದಿ|| ಎಂ.ಪಿ.ರವೀಂದ್ರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿ ಪಕ್ಷ ಸಂಘಟಿಸಿ, 2013ರಲ್ಲಿ ಶಾಸಕರಾಗಿ ಆಯ್ಕೆ ಯಾದರು. ಆದರೆ, ಕಾರಣಾಂತ ರದಿಂದ 2018 ರಲ್ಲಿ ಪರಾಭವ ಗೊಂಡರು. ನಂತರ ಕೆಲ ದಿನ ಗಳಲ್ಲಿ ಅನಾರೋಗ್ಯದಿಂದ ನಿಧನರಾದರು.
ಆಗ ಎಂ.ಪಿ.ಪ್ರಕಾಶ್‌ರವರ ಹಿರಿಯ ಪುತ್ರಿ ಎಂ.ಪಿ.ಲತಾ ಅವರು ಸಹೋದರನ ಜಾಗ ತುಂಬಿ ತಾಲ್ಲೂಕಿನಲ್ಲಿ ಪಕ್ಷಕ್ಕೆ ಚೈತನ್ಯ ನೀಡಿದರು. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಾಕಷ್ಟು ಶ್ರಮ ವಹಿಸಿ, ಮತಗಳನ್ನು ಹೆಚ್ಚಿಸಿದರು. ಇನ್ನೊಬ್ಬ ಪುತ್ರಿ ಎಂ.ಪಿ.ವೀಣಾ ಅವರು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮ ಗಳ ಜೊತೆ ಪಕ್ಷ ಸಂಘಟನೆ ಕೈಗೊಂಡರು. ಕಳೆದ ಒಂದು ವರ್ಷದ ಹಿಂದೆ ಪುರಸಭಾ ಚುನಾವಣೆಯಲ್ಲಿ ಫೀಲ್ಡ್‌ಗೆ ಎಂಟ್ರಿಯಾದ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು, ತಮ್ಮ ಬೆಂಬಲಿಗರೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಕೆಲವರು ಕೆಲವೊಂದು ಕಡೆ ಗುರುತಿಸಿಕೊಂಡರು. ಇನ್ನೂ ಕೆಲವರು ತಟಸ್ಥರಾಗಿದ್ದು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಹೀಗೆ 3 ಬಣಗಳಾದ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಗೋಚರಿಸತೊಡಗಿತು. ಆ ಭಿನ್ನಮತ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಗೆ ರಾಜ್ಯಾದ್ಯಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಎನ್ಎಸ್‌ಯುಐ ಹಾಗೂ ಸಾಮಾಜಿಕ ಜಾಲ ತಾಣಗಳ ನೇತೃತ್ವದಲ್ಲಿ ಹೊಸಗುಂಪು ಪ್ರತ್ಯೇಕವಾಗಿ ಕಾರ್ಯಕ್ರಮ ಸಂಘಟಿಸಿ, ತಮ್ಮ ಅಸ್ತಿತ್ವ ತೋರಿಸಿಕೊಂಡವು.
ನಾಲ್ಕು ಬಣಗಳು ನಾವು ಯಾರಿಗೇನು ಕಡಿಮೆ ಎಂಬಂತೆ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿ, ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿ ನೀಡಿದವು. ಈ ಕುರಿತು ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಕೆ.ಮಂಜುನಾಥ್, ಕನಕನ ಬಸಾಪುರ ಮಾತನಾಡಿ, ದಿ|| ಎಂ.ಪಿ.ರವೀಂದ್ರ ಶಾಸಕರಿದ್ದಾಗ ಕಾಂಗ್ರೆಸ್ ಪಕ್ಷವನ್ನು ಕೆಳ ಹಂತದಿಂದ ಸಂಘಟಿಸಿ ಜಾತಿ, ಮತ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಆದರೆ, ಅವರು ಕಾಲವಾದ ನಂತರ ಭಿನ್ನಮತ ಜಾಸ್ತಿಯಾಗುತ್ತಾ ಬಂತು. ಕಾಂಗ್ರೆಸ್ ಪಕ್ಷಕ್ಕೆ ನವಚೇತನ ನೀಡುತ್ತಿರುವ ನೂತನ ಕೆಪಿಸಿಸಿ ಅಧ್ಯಕ್ಷರು ಈ ಕಡೆ ಗಮನ ಹರಿಸಿ, ಭಿನ್ನಮತ ಶಮನ ಮಾಡಬೇಕು ಎಂದರು.
ಹರಪನಹಳ್ಳಿ ತಾಲ್ಲೂಕು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಈಚೆಗೆ ಪ್ರಮುಖ ಹೊರಗಿನ ಜನಪ್ರತಿನಿಧಿಯೊಬ್ಬರ ಸ್ವ ಹಿತಾಸಕ್ತಿಗೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗುತ್ತಲಿದೆ.
ಜನರು ಈಗ ಬಹಳ ಬುದ್ದಿವಂತರಿದ್ದಾರೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾನು, ನನ್ನಿಂದ ಎಂಬುವರಿಗೆ ತಕ್ಕಪಾಠ ಕಲಿಸಲು ಕಾಯುತ್ತಿದ್ದಾರೆ. ಆದ್ದರಿಂದ ಹೈಕಮಾಂಡ್ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಈ ವಿಧಾನಸಭಾ ಕ್ಷೇತ್ರವನ್ನು ಮರೆಯುವುದು ಒಳಿತು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಉಚ್ಚೆಂಗೆಪ್ಪ ಕೋರಿಶೆಟ್ಟಿ