ಸಕಾಲದಲ್ಲಿ ರೈತರಿಗೆ ಕಡಲೆ ಬೀಜ ವಿತರಣೆಗೆ ಅಗತ್ಯ ಕ್ರಮ : ಜಗಳೂರು ತಹಶೀಲ್ದಾರ್

ಜಗಳೂರು, ಅ.8- ಕಡಲೆ ಬೀಜ ಎಲ್ಲಾ ರೈತರಿಗೂ ಲಭ್ಯವಿದ್ದು, ಆತುರಪಡದೇ ಸಮಾಧಾನದಿಂದ ವರ್ತಿಸಿ, ಸಾಮಾಜಿಕ ಅಂತರದೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳುವಂತೆ ತಹಶೀಲ್ದಾರ್ ಡಾ.ನಾಗವೇಣಿ ರೈತರಿಗೆ ಸಲಹೆ ನೀಡಿದರು. 

ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರಿಗೆ ಕಡಲೆ ಬೀಜ ವಿತರಿಸಿ ಮಾತನಾಡಿದ ಅವರು, ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಿಂಗಾರು ಹಂಗಾಮಿನ ಬೆಳೆಯಾಗಿರುವ ಕಡಲೆ ಬೆಳೆಯಲು ಉತ್ಸುಕರಾಗಿದ್ದು, ಸಕಾಲದಲ್ಲಿ ರೈತರಿಗೆ ಕಡಲೆ ಬೀಜ ವಿತರಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. 

ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸಲು ಮಾತನಾಡಿ, ಈ ಬಾರಿ ಕಡಲೆ ಬೀಜಕ್ಕೆ ರೈತರಿಂದ ಹೆಚ್ಚಿನ ಬೇಡಿಕೆಯಿದ್ದು, ಅಗತ್ಯಕ್ಕೆ ತಕ್ಕಂತೆ ಸಕಾಲದಲ್ಲಿ ರೈತರಿಗೆ ಒದಗಿಸಲು ಈಗಾಗಲೇ 2000 ಟನ್ ಕಡಲೆ ಬೀಜವನ್ನು ದಾಸ್ತಾನು ಮಾಡಲಾಗಿದೆ. ಕೊರೊನಾ ಪರೀಕ್ಷೆಗೆ ಒಳಗಾಗಿ ನಂತರ ಸರತಿ ಸಾಲಿನಲ್ಲಿ ನಿಂತು ಬೀಜ ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಟಿಹೆಚ್‍ಒ ಡಾ.ನಾಗರಾಜ್, ಆರೋಗ್ಯ ಸಹಾಯಕರು, ಕೃಷಿ ಇಲಾಖೆಯ ಸಿಬ್ಬಂದಿಗಳು, ಪಿಎಸ್‍ಐ ಉಮೇಶ್ ಬಾಬು ಸೇರಿದಂತೆ ರೈತ ಬಾಂಧವರು ಹಾಜರಿದ್ದರು.

error: Content is protected !!