ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ ಅಂತ್ಯ

ಕಳೆದ ವರ್ಷಗಳಿಗಿಂತ ಹೆಚ್ಚು ವಿದ್ಯಾರ್ಥಿಗಳು ಗೈರು : ತೃತೀಯ ಭಾಷೆಗೆ 1118 ಗೈರು

ದಾವಣಗೆರೆ,  ಜು.3- ಕೊರೊನಾ ಆತಂಕದ ನಡುವೆ ಆರಂಭವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತೂ ಇಂತೂ ಮುಕ್ತಾಯಗೊಂಡಿದೆ.

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ರೊಂದಿಗೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೂ ನಿಟ್ಟುಸಿರು ಬಿಟ್ಟಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಪರೀಕ್ಷೆ ಎದುರಿಸುವ ಕುರಿತು ಹೆಚ್ಚಾಗಿದ್ದ ಆತಂಕ ಗೈರು ಹಾಜರಿಗೆ ಕಾರಣವಾಗಿದೆ ಎನ್ನಬಹುದು. 

ಜಿಲ್ಲೆಯಲ್ಲಿ ಒಟ್ಟು 93 ಪರೀಕ್ಷಾ ಕೇಂದ್ರಗಳಲ್ಲಿ 21,683 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ ಪ್ರತಿ ವಿಷಯಕ್ಕೂ ಸುಮಾರು ಸಾವಿರದ ಆಸು ಪಾಸು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಪರೀಕ್ಷೆ ನಡೆಸಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ಸರ್ಕಾರ ದೃಢ ಸಂಕಲ್ಪ ಮಾಡಿ ಪರೀಕ್ಷೆ ನಡೆಸಲು ಸಿದ್ಧವಾಗಿತ್ತು. ಆದರೆ, ಪರೀಕ್ಷೆ ಬೇಡ ಎಂಬ ಅಪಸ್ವರವೂ ಹೆಚ್ಚಾಗಿ ಕೇಳಿ ಬಂತು. ಇವೆಲ್ಲವನ್ನೂ ಮೆಟ್ಟಿನಿಂತು ಇಲಾಖೆ ಪರೀಕ್ಷೆ ನಡೆಸಿದ್ದು, ಜಿಲ್ಲೆಯಲ್ಲಿಯೂ ಸಹ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಇಲಾಖೆ ಪರೀಕ್ಷೆ ನಡೆಸಿದೆ. 

ತೃತೀಯ ಭಾಷೆಗೆ 1118 ಗೈರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎಸ್‍ಎಸ್‍ಎಲ್‍ಸಿ ತೃತೀಯ ಭಾಷೆ  ಪರೀಕ್ಷೆಗೆ ಒಟ್ಟು 2,1548 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 20,430 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1,118 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಕಂಟೈನ್‍ಮೆಂಟ್ ಝೋನ್‍ನಿಂದ 85 ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದಿದ್ದಾರೆ. ಒಟ್ಟು 446 ಜನರು ಖಾಸಗಿ ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 

ಇದರಲ್ಲಿ 357 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.  ಇಬ್ಬರು ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. 89 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

392 ವಲಸೆ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 388 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇಬ್ಬರು ವಿದ್ಯಾರ್ಥಿ ಗಳು ಗೈರು ಹಾಜರಾಗಿದ್ದಾರೆ. 191 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದು ಪರೀಕ್ಷೆಗೆ ಹಾಜರಾಗಿರುವುದಾಗಿ ಪ್ರಕಟಣೆ ತಿಳಿಸಿದೆ.

error: Content is protected !!