ಸಾಣೇಹಳ್ಳಿಯಲ್ಲಿ ಚಿರತೆ ತಂದ ಆತಂಕ

ಸಾಣೇಹಳ್ಳಿ, ಜೂ.29- ಕಳೆದ ಎರಡು ದಿನಗಳಿಂದ ಸಾಣೇಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. 

ಮೊನ್ನೆ ರಾತ್ರಿ ಶ್ರೀಮಠದ ಪಕ್ಕದಲ್ಲಿರುವ ರಾಜಕುಮಾರ್ ಅವರು ಸಾಕಿದ್ದ ನಾಯಿಯನ್ನು ಹೊತ್ತುಕೊಂಡು ಹೋಗುವಾಗ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕೆಡವಿದೆ. ಬೈಕ್ ಬಿದ್ದ ಸದ್ದು ಕೇಳಿ ಹೊರಬಂದು ನೋಡುವಷ್ಟರಲ್ಲಿ ಕಣ್ಮರೆಯಾಗಿದೆ. ಮತ್ತೆ ನಿನ್ನೆ ರಾತ್ರಿ ಪಕ್ಕದ ಮನೆಯ ಮೂರ್ತಿ ಮತ್ತು ಸ್ವಾಮಿ ಎಂಬು ವವರು ಸಾಕಿದ್ದ ನಾಯಿಯನ್ನು ಹೊತ್ತುಕೊಂಡು ಹೋಗಿದೆ. 

ಹೀಗೆ ಹೋಗುವಾಗ ದಾರಿಯಲ್ಲಿ ಬರುತ್ತಿದ್ದ ಜೆಸಿಬಿ ಆಪರೇಟರ್ ಅವರ ಕಾರಿಗೆ ಅಡ್ಡಲಾಗಿ ಹೋಗಿದ್ದು, ಅದನ್ನು ಅವರು ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ರಾತ್ರಿ ಕತ್ತಲಾದ್ದರಿಂದ ವೀಡಿಯೋ ಅಸ್ಪಷ್ಟವಾಗಿ ಮೂಡಿ ಬಂದಿದೆ. ಶ್ರೀಮಠದಲ್ಲಿ ಶಾಲಾ – ಕಾಲೇಜುಗಳಿದ್ದು, ಸದ್ಯ ನೂರಾರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. 

ರೈತರು ರಾತ್ರಿ ಹೊತ್ತು ತೋಟ, ಹೊಲ ಗದ್ದೆಗಳಿಗೆ ಓಡಾಡುತ್ತಿರುತ್ತಾರೆ. ಅಲ್ಲದೇ ಬಹುಮುಖ್ಯವಾಗಿ ಪಂಡಿತಾರಾಧ್ಯ ಶ್ರೀಗಳು ದಿನವೂ ಮುಂಜಾನೆ ಮತ್ತು ಸಂಜೆ ಮಠದ ಜಮೀನುಗಳಿಗೆ ಭೇಟಿ ನೀಡುವ ಹವ್ಯಾಸನ್ನಿಟ್ಟುಕೊಂಡಿದ್ದಾರೆ. ಈ ವಿಷಯವನ್ನು ಪೂಜ್ಯರ ಗಮನಕ್ಕೆ ತಂದಿದ್ದು, ಸದ್ಯ ಸ್ವಲ್ಪ ದಿನಗಳವರೆಗೆ ಬೆಳಗ್ಗೆ-ಸಂಜೆ ಹೊಲ – ಗದ್ದೆಗಳಿಗೆ ಹೋಗುವುದನ್ನು ನಿಲ್ಲಿಸುವಂತೆ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ. 

ಏನಾದರೂ ಅನಾಹುತವಾಗುವ ಮುನ್ನ ಸಾಧ್ಯವಾದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಚಿರತೆಯನ್ನು ಹಿಡಿಯುವ ಮೂಲಕ ಸಾರ್ವಜನಿಕರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!