ದಾವಣಗೆರೆ, ಜೂ.29- ರಾಜ್ಯಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪ್ರತಿ ದಿನ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಜಾರಿಗೊಳಿಸಿದ್ದಾರೆ.
ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಅವಶ್ಯಕವಲ್ಲದ ಚಟುವಟಿಕೆಗಳ, ವ್ಯಕ್ತಿಗಳ ಹಾಗೂ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ. ಬರುವ ಜುಲೈ 5 ರ ಭಾನುವಾರದಿಂದ ಆಗಸ್ಟ್ 2 ರವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣ ದಿನದ ಲಾಕ್‌ಡೌನ್ ಎಂದು ಘೋಷಿಸಲಾಗಿರುತ್ತದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ನಿರ್ಬಂಧವಿರುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದವರು ಎಚ್ಚರಿಸಿದ್ದಾರೆ.