ರಂಭಾಪುರಿ ಪೀಠ (ಬಾಳೆಹೊನ್ನೂರು), ಅ.4- ಭದ್ರಾ ಹುಲಿ ಯೋಜನೆ ಮತ್ತು ಪರಿಸರ ಸೂಕ್ಷ್ಮ ವಲಯ ಜನವಸತಿ ಗ್ರಾಮ ಹೊರತು ಪಡಿಸಿ ಜಾರಿಗೊಳಿಸಬೇಕು. ಈಗಾಗಲೇ ತೀರ್ಮಾನಿಸಿರುವ ಘೋಷಣೆ ಅವೈಜ್ಞಾನಿಕವಾಗಿದ್ದು, ಮತ್ತೊಮ್ಮೆ ಪರಿಶೀಲಿಸುವ ಅವಶ್ಯಕತೆ ಇದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ರಂಭಾಪುರಿ ಪೀಠದಲ್ಲಿ ಇಂದು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಜಗದ್ಗುರುಗಳು ಮಾತನಾಡಿದರು.
ಭದ್ರಾ ಹುಲಿ ಯೋಜನೆಗಾಗಿ 1974ರಲ್ಲಿ 492 ಚ. ಕಿಲೋಮೀಟರ್ ಘೋಷಿಸಲಾಗಿತ್ತು. ಈಗ ಮತ್ತೆ ಘೋಷಿಸಲು ಹೊರಟಿರುವ ವ್ಯಾಪ್ತಿ ಅವೈಜ್ಞಾನಿಕವಾಗಿದ್ದು, ಯಾವುದೇ ಗ್ರಾಮದ ಜನತೆಗಾಗಲೀ, ಸಮಿತಿಗಳಿಗಾಗಲೀ, ಗ್ರಾಮ ಸಭೆಗಳ ಸಮಿತಿಗೆ ಗೊತ್ತಿಲ್ಲದೇ ಇರುವುದು ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ. ಎನ್.ಆರ್.ಪುರ ತಾಲ್ಲೂಕಿನ ಹತ್ತಾರು ಗ್ರಾಮಗಳಿಗೆ ಈ ಯೋಜನೆಯಿಂದ ತೊಂದರೆಯಾಗುವುದಲ್ಲದೇ ಸುಮಾರು 75 ದೇವಾಲಯಗಳು, 3 ಚರ್ಚ್ ಮತ್ತು 4 ಮಸೀದಿಗಳನ್ನು ಒಳಗೊಂಡಿರುತ್ತವೆ. ಈ ಎರಡು ಯೋಜನೆಗಳಿಂದ ಎನ್.ಆರ್.ಪುರ ತಾಲ್ಲೂಕು ಕಣ್ಮರೆಯಾಗುವ ದುಸ್ಥಿತಿ ಬಂದಿದೆ. ಭದ್ರಾ ಮೇಲ್ದಂಡೆ ಮತ್ತು ಭದ್ರಾ ಹುಲಿ ಯೋಜನೆಯಿಂದ ಈಗಾಗಲೇ ನಿರಾಶ್ರಿತರಾದ ಕುಟುಂಬಗಳು ಮತ್ತೆ ಈ ಯೋಜನೆಗೆ ಒಳಪಡುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ರೈತರ ಮೂಲ ಸೌಕರ್ಯಗಳಾದ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಕೃಷಿ ಚಟುವಟಿಕೆ, ಭದ್ರಾ ನದಿ ನೀರಿನ ಬಳಕೆ, ಜಾನುವಾರು ಸಂರಕ್ಷಣೆ, ರಸಗೊಬ್ಬರ ಬಳಕೆ, ಧಾರ್ಮಿಕ ಉತ್ಸವ, ಜಾತ್ರೆ ಮತ್ತು ರಾತ್ರಿ ಸಂಚಾರ ಇವೆಲ್ಲವುಗಳಿಗೆ ಈ ಯೋಜನೆಯಿಂದ ಕೃಷಿ ಅವಲಂಬಿತ ಕುಟುಂಬಗಳು ಹೆಚ್ಚು ತೊಂದರೆ ಅನುಭವಿಸುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಈ ಎರಡೂ ಯೋಜನೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಜನವಸತಿ ಗ್ರಾಮಗಳನ್ನು ಹೊರತುಪಡಿಸಿ ಜಾರಿಗೆ ತರಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದು ರಂಭಾಪುರಿ ಜಗದ್ಗುರುಗಳು ಒತ್ತಾಯಿಸಿದ್ದಾರೆ.