ದಾವಣಗೆರೆ, ಸೆ. 3 – ನಗರದ ನಾಲ್ಕು ಕಡೆಗಳಲ್ಲಿ ಫುಡ್ ಕೋರ್ಟ್ಗಳನ್ನು ಆರಂಭಿಸ ಲಾಗುವುದು ಹಾಗೂ ರಸ್ತೆ ಬದಿಯಲ್ಲಿರುವ ಅಂಗಡಿಗಳಿಗೆ ಪರ್ಯಾಯ ತಾಣಗಳನ್ನು ಕಲ್ಪಿಸುವ ಮೂಲಕ ಫುಟ್ಪಾತ್ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಮೇಯರ್ ಅಜಯ್ಕುಮಾರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ರಾಂ ಅಂಡ್ ಸರ್ಕಲ್, ಗುಂಡಿ ಸರ್ಕಲ್, ಅರುಣ ಸರ್ಕಲ್ ಸೇರಿದಂತೆ ಹಲವೆಡೆ ಫುಟ್ಪಾತ್ಗಳ ಮೇಲೆ ಬೀದಿ ಬದಿ ಅಂಗಡಿಗಳಿದ್ದು ಇದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗಿದೆ ಎಂದರು.
ಈ ಬಗ್ಗೆ ನಿನ್ನೆಯಷ್ಟೇ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರ ಜೊತೆ ಚರ್ಚಿಸಿ, ನಗರದ ನಾಲ್ಕು ಕಡೆಗಳಲ್ಲಿ ಫುಡ್ಕೋರ್ಟ್ ಆರಂಭಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಗುಂಡಿ ಸರ್ಕಲ್ ಬಳಿ ಇರುವ ಬೀದಿ ಹೋಟೆಲ್ಗಳನ್ನು ಕಾಸಲ್ ಶೆಟ್ಟಿ ಪಾರ್ಕ್ ಬಳಿಯ ಫುಡ್ಕೋರ್ಟ್ಗೆ ವರ್ಗಾಯಿಸಲು, ಅರುಣ ಸರ್ಕಲ್ ಬಳಿಯ ಬೀದಿ ಹೋಟೆಲ್ಗಳನ್ನು ಮೀನು ಮಾರುಕಟ್ಟೆಯಲ್ಲಿರುವ ಪಾಲಿಕೆಯ ಜಾಗಕ್ಕೆ ವರ್ಗಾಯಿಸಲು ಪರಿಶೀಲಿಸಲಾಗುತ್ತಿದೆ ಎಂದರು.
ಅಲ್ಲದೇ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗಡಿಯಾರ ವೃತ್ತದಿಂದ ಲಕ್ಷ್ಮಿ ಫ್ಲೋರ್ ರಸ್ತೆಯವರೆಗಿನ ಜಾಗದ ನಡುವೆ 40 ಅಡಿ ಬಫರ್ ವಲಯದಲ್ಲಿ ತರಕಾರಿ ಹಾಗೂ ತಿಂಡಿ ಅಂಗಡಿಗಳಿಗೆ ಪ್ರತ್ಯೇಕ ವಲಯವನ್ನು ರೂಪಿಸಲಾಗುವುದು. ಇದಕ್ಕಾಗಿ ಪಾಲಿಕೆಯ ಯೋಜನೆಯಡಿ ಅನುದಾನ ಬಳಸಿಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಫುಟ್ಪಾತ್ ವ್ಯಾಪಾರಿಗಳಿಗೆ ಬೇರೆ ಕಡೆ ಜಾಗ ಕಲ್ಪಿಸಲು ಪರಿಶೀಲಿಸಲಾಗುತ್ತಿದೆ. ಅವರ ವ್ಯಾಪಾರಕ್ಕೆ ತೊಂದರೆಯಾಗದಂತೆ ಹಾಗೂ ಜನರ ಸಂಚಾರಕ್ಕೆ ಸುಗಮವಾಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಜಯ್ ಕುಮಾರ್ ಹೇಳಿದ್ದಾರೆ.
ಲಕ್ಷ ಸಸಿ : ಪಾಲಿಕೆ ವತಿಯಿಂದ 1 ಲಕ್ಷ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪರಿಷತ್ ಚುನಾವಣೆ ಕಾರಣದಿಂದಾಗಿ ನೀತಿ ಸಂಹಿತೆ ಹೇರಿರುವುದರಿಂದ ಯೋಜನೆ ತಡವಾಗಿದೆ. ಚುನಾವಣೆ ಮುಗಿದ ತಕ್ಷಣವೇ ಯೋಜನೆ ಜಾರಿಗೆ ತರುವ ಮೂಲಕ ನಗರವನ್ನು ಹಸಿರೀಕರಣ ಮಾಡಲಾಗುವುದು ಎಂದವರು ಹೇಳಿದ್ದಾರೆ.