ಜನವಿರೋಧಿ ನೀತಿ ವಿರುದ್ಧ ಮಾಧ್ಯಮಗಳು ಜನಾಂದೋಲನ ನಡೆಸಲಿ

ಜನವಿರೋಧಿ ನೀತಿ ವಿರುದ್ಧ ಮಾಧ್ಯಮಗಳು ಜನಾಂದೋಲನ ನಡೆಸಲಿ - Janathavaniದಾವಣಗೆರೆ, ಜೂ.27- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಇಂತಹ ಜನ ವಿರೋಧಿ ನೀತಿಯ ವಿರುದ್ಧ ಮಾಧ್ಯಮಗಳೇ ಜನಾಂದೋಲನಕ್ಕೆ ಮುಂದಾಗಬೇಕೆಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮನವಿ ಮಾಡಿದ್ದಾರೆ.

ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ರೀತಿಯಲ್ಲಿ ಜನ ವಿರೋಧಿ ನೀತಿಯನ್ನು ಜಾರಿಗೆ ತರಲು ಹೊರಟರೆ ವಿಪಕ್ಷಗಳೊಂದಿಗೆ ಮಾಧ್ಯಮಗಳು ಹೋರಾಟಕ್ಕಿಳಿಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಸಹ ಹೋರಾಟಕ್ಕಿಳಿಯುವುದಿರಲಿ ಕನಿಷ್ಟ ಪಕ್ಷ ಅದನ್ನು ಖಂಡಿಸುವ ಕೆಲಸವನ್ನೂ ಸಹ ಮಾಡದಿರುವುದು ದುರ್ದೈವವೇ ಸರಿ ಎಂದಿದ್ದಾರೆ.

ಕೇಂದ್ರವು ಅಗತ್ಯ ವಸ್ತುಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಮಾಡುವುದರ ಜೊತೆಗೆ ಅವೈಜ್ಞಾನಿಕವಾಗಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರವೂ ಸಹ ಕನಿಷ್ಟ ಆರೋಗ್ಯ ಸೌಲಭ್ಯವನ್ನು ಸಹ ಉಚಿತವಾಗಿ ಒದಗಿಸದೇ ಚಿಕಿತ್ಸೆಗೆ ಹಣವನ್ನು ನಿಗದಿಪಡಿಸಿದೆ. ಇದಲ್ಲದೇ ಸಾರಿಗೆ ಮತ್ತಿತರೆ ನಿಯಮದ ಉಲ್ಲಂಘನೆಯಡಿ ಹಣವನ್ನು ವಸೂಲಿ ಮಾಡುತ್ತಿದೆ.

ಕಳೆದ 25-30 ವರುಷಗಳ ಹಿಂದೆ ಕನಿಷ್ಟ ಟೀ-ಕಾಫೀ, ತಿಂಡಿ ದರ ಏರಿಕೆಯಾದರೂ ಸಹ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ಆದರೆ ಇಂದು  ತೆರಿಗೆ ಭಾರದ ಜೊತೆಗೆ ಅಗತ್ಯ ವಸ್ತುಗಳ ದರ ಗಗನಕ್ಕೇರಿದ್ದರೂ ಸಹ ಯಾರೂ ಹೋರಾಟಕ್ಕಿಳಿಯದೇ ಸರ್ಕಾರಗಳ ಅವೈಜ್ಞಾನಿಕ ತೆರಿಗೆಗೆ ಅವಕಾಶ ನೀಡಿದಂತಾಗಿದ್ದು, ಯುವಜನತೆ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರಗಳು ಇನ್ನಷ್ಟು ತೆರಿಗೆ ಭಾರ ಹಾಕುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು   ನಾಗರಾಜ್ ಎಚ್ಚರಿಸಿದ್ದಾರೆ.

error: Content is protected !!