ಹರಪನಹಳ್ಳಿಯಲ್ಲಿ ಕೆ.ಆರ್. ಗಿರೀಶ್
ಹರಪನಹಳ್ಳಿ, ಜೂ. 28- ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಮಡಿವಾಳ ಮತ್ತು ಕ್ಷೌರಿಕ ಸಮಾಜದ ವೃತ್ತಿ ನಿರತರಿಗೆ ರಾಜ್ಯ ಸರ್ಕಾರ ಘೋಷಿಸಿದ 5 ಸಾವಿರ ರೂಪಾಯಿ ಹಣ ಬರೇ ಘೋಷಣೆಯಾಗಿ ಉಳಿದಿದೆಯೇ ಹೊರತು, ಯಾವೊಬ್ಬ ಫಲಾನುಭವಿಯ ಖಾತೆಗೂ ಜಮಾ ಆಗಿಲ್ಲ ಎಂದು ತಾಲ್ಲೂಕು ಸವಿತಾ ಸಮಾಜದ ಯುವ ಘಟಕದ ಮಾಜಿ ಖಜಾಂಚಿ ಕೆ.ಆರ್. ಗಿರೀಶ್ ಆರೋಪಿಸಿದ್ದಾರೆ.
ಅಂಗಡಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದರೂ ಕೂಡ ಜನಸಾಮಾನ್ಯರು ಕೊರೊನಾ ಭಯದಿಂದ ಇಂದಿಗೂ ಕಟಿಂಗ್ ಶಾಪ್ಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಈ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ರಾಜ್ಯ ಸರ್ಕಾರ ಘೋಷಿಸಿದ ನೆರವಿನ ಹಣ ಫಲಾನುಭವಿಗಳ ಕೈ ಸೇರುವಂತೆ ಸೂಕ್ತ ಕ್ರಮವಹಿಸಿ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.