ದಾವಣಗೆರೆ ಅರ್ಬನ್ ಬ್ಯಾಂಕ್‌ನಿಂದ ಬಡ್ಡಿಯಲ್ಲಿ ವಿಶೇಷ ರಿಯಾಯಿತಿ ವಿಸ್ತರಣೆ

ದಾವಣಗೆರೆ,ಜೂ.24- ತನ್ನಲ್ಲಿ ಸಾಲ ಪಡೆದ ಗ್ರಾಹಕರಿಗೆ ಬಡ್ಡಿಯಲ್ಲಿ ಶೇ.1ರಷ್ಟು ವಿಶೇಷ ರಿಯಾಯಿತಿಯನ್ನು ನಿಗದಿತ ಅವಧಿಗೆ ನೀಡುವುದರ ಮೂಲಕ ಸ್ಫೂರ್ತಿ ಪಡೆದಿರುವ ನಗರದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಇದೀಗ ಆ ಅವಧಿಯನ್ನು ವಿಸ್ತರಿಸಿದೆ.

ಈ ವಿಶೇಷ ರಿಯಾಯಿತಿಯನ್ನು ಬರುವ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಗಳ ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಅಸಲು ಮತ್ತು ಬಡ್ಡಿಯನ್ನು ಆಯಾ ತಿಂಗಳ 10ನೇ ತಾರೀಖಿನೊಳಗೆ ಪಾವತಿ ಮಾಡಿದ ಗ್ರಾಹಕರಿಗೆ ಮಾತ್ರ ಬಡ್ಡಿಯಲ್ಲಿ ಶೇ.1ರಂತೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ.

ಕೈಗಾರಿಕೋದ್ಯಮಿಯೂ ಆಗಿರುವ ಬ್ಯಾಂಕಿನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಕ್ಕೇಶಪ್ಪ, ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಆಗಿದ್ದ ಜನತಾ ಕರ್ಫ್ಯೂ ಪರಿಣಾಮ, ವ್ಯವಹಾರಗಳು ಸ್ಥಗಿತಗೊಂಡ ಕಾರಣ ತೊಂದರೆಗೊಳಗಾಗಿದ್ದ ಗ್ರಾಹಕರಿಗೆ ಸಹಕಾರ ನೀಡುವ ಸದುದ್ದೇಶದಿಂದ ಕಳೆದ ಮೂರು ತಿಂಗಳು ಬಡ್ಡಿಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ಅನುಕೂಲ ಪಡೆದಿರುವ ಸಾಲ ಪಡೆದ ಗ್ರಾಹಕರು ಮತ್ತಷ್ಟು ಚೇತರಿಸಿಕೊಳ್ಳಲಿ ಎಂಬ ಆಶಯದೊಂದಿಗೆ ವಿಶೇಷ ರಿಯಾಯಿತಿಯನ್ನು ಮುಂದುವರೆಸಲಾಗಿದೆ ಎಂದು ಹೇಳಿದರು.

ಬ್ಯಾಂಕಿಗೆ ಲಾಭ ಎಷ್ಟು ಮುಖ್ಯವೋ, ಸಾಲ ಪಡೆದ ಗ್ರಾಹಕರ ಹಿತವೂ ಅಷ್ಟೇ ಮುಖ್ಯ. ಈ ಕಾರಣದಿಂದಾಗಿ ಬ್ಯಾಂಕಿಗೆ ಆಗಬಹುದಾದ ನಷ್ಟವನ್ನು ಪರಿಗಣಿಸುವುದರ ಜೊತೆ – ಜೊತೆಗೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಾಲ ಪಡೆದ ಗ್ರಾಹಕರಿಗೆ ಸಹಕರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಕ್ಕೇಶಪ್ಪ ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಕಾಲ ಸಾಲದ ಬಡ್ಡಿಯಲ್ಲಿ ನೀಡಿದ ವಿಶೇಷ ರಿಯಾಯಿತಿಯಿಂದ ತಮ್ಮ ಬ್ಯಾಂಕಿಗೆ ಆಗಿರುವ ಲಾಭ – ನಷ್ಟದ ಅಂಕಿ – ಅಂಶಗಳನ್ನು ಸಭೆಗೆ ಒದಗಿಸಿ ಹರ್ಷಗೊಂಡ ಅವರು, ಇದು  ; ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ಸೌಹಾರ್ದತೆಯನ್ನು ವೃದ್ಧಿಸುವ ಕ್ರಮಕ್ಕೆ ಹಿಡಿದ ಕೈಗನ್ನಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಲ ಪಡೆದ ಗ್ರಾಹಕರಿಗೆ ಅನುಕೂಲ ಮಾಡುವುದರಿಂದ ಅವರ ವ್ಯಾಪಾರ, ವಹಿವಾಟು ಅಭಿವೃದ್ಧಿ ಹೊಂದುವುದರ ಜೊತೆಗೆ ನಮ್ಮ ಬ್ಯಾಂಕಿನ ಪ್ರಗತಿಗೂ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ತೊಂದರೆಯಲ್ಲಿರುವ ಸಾಲ ಪಡೆದ ಗ್ರಾಹಕರಿಗೆ ವಿಶೇಷ ರಿಯಾಯಿತಿ  ನೀಡುವುದನ್ನು ಮತ್ತೆ 3 ತಿಂಗಳ ಮಟ್ಟಿಗೆ ಮುಂದುವರೆಸುವುದು ಸೂಕ್ತ ಎಂದು ಜವಳಿ ಉದ್ಯಮಿಯೂ ಆಗಿರುವ ಬ್ಯಾಂಕಿನ ಹಿರಿಯ ನಿರ್ದೇಶಕರಲ್ಲೊಬ್ಬರಾದ ಬಿ.ಸಿ. ಉಮಾಪತಿ ಪ್ರತಿಪಾದಿಸಿದರು.

ಬ್ಯಾಂಕಿನ ಹಿರಿಯ ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ದೇವರಮನೆ ಶಿವಕುಮಾರ್, ಟಿ.ಎಸ್. ಜಯರುದ್ರೇಶ್, ಅಂದನೂರು ಮುಪ್ಪಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಕಂಚಿಕೆರೆ ಮಹೇಶ್ ಮತ್ತಿತರರು ವಿಷಯ ಕುರಿತು ನಡೆದ ಚರ್ಚೆಯಲ್ಲಿ ಸಲಹೆ – ಸೂಚನೆಗಳನ್ನು ನೀಡಿದರು.

ನಿರ್ದೇಶಕರುಗಳಾದ ಎಂ. ಚಂದ್ರಶೇಖರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಇ.ಎಂ.ಮಂಜುನಾಥ, ನಲ್ಲೂರು ಎಸ್. ರಾಘವೇಂದ್ರ, ವೃತ್ತಿ ಪರ ನಿರ್ದೇಶಕ ವಿ.ಲಿಂಗರಾಜ್, ವಿಶೇಷ ಆಹ್ವಾನಿತರಾದ ಬೆಳ್ಳೂಡಿ ಮಂಜುನಾಥ್, ಎಂ. ದೊಡ್ಡಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಡಿ.ವಿ. ಆರಾಧ್ಯಮಠ ಅವರು ವಿಷಯ ಮಂಡಿಸಿದರು. ಸಭೆಯ ಆರಂಭದಲ್ಲಿ,  ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

error: Content is protected !!