ದಾವಣಗೆರೆ, ಜೂ.23- ವಿದ್ಯುತ್ ಬಿಲ್ ಹೆಚ್ಚಳಕ್ಕೆ ಖಂಡನೆಯ ಜೊತೆಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಹಿರಿಯ ನಾಗರಿಕರ ಮತ್ತು ವಿಧವೆಯರ ಪಿಂಚಣಿಯನ್ನು ಶೀಘ್ರ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು ಪ್ರತಿಭಟಸಿ, ನಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.
ಕೊರೊನಾ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ರಕ್ಷಣೆಗೆ ಮುಂದಾಗಿ ಕರ್ತವ್ಯ ನಿರ್ವಹಿಸು ತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯರನ್ನು ರಾಜ್ಯ ಸರ್ಕಾರ ಜೀತದ ಕಾರ್ಮಿಕರಂತೆ ದುಡಿಸಿಕೊಳ್ಳುತ್ತಿದೆ. ಲಾಕ್‍ಡೌನ್ ಆದ ದಿನದಿಂದ ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಗತ್ಯವಾಗಿ ಬೇಕಾದ ಸಂರಕ್ಷಣಾ ಕಿಟ್‍ಗಳನ್ನು ನೀಡದೇ ಅವರ ಕುಟುಂಬದೊಂದಿಗೆ ಚೆಲ್ಲಾಟ ಆಡುತ್ತಿರುವುದು ಸರಿಯಲ್ಲ. ಕೇವಲ ಮಾತಿನಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆ ಎಂದು ಪ್ರತಿಭಟನಾ ಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್‍ಡೌನ್ ಅವಧಿಯಲ್ಲಿ ಉದ್ಯೋಗ, ವ್ಯಾಪಾರವಿಲ್ಲದೇ ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಒಂದೊತ್ತಿನ ಊಟಕ್ಕಾಗಿ ಕೈ ಚಾಚುವ ಸ್ಥಿತಿ ನಿರ್ಮಾಗೊಂಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿದ್ಯುತ್ ಬಿಲ್ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ತಿಂಗಳಿಗೆ 150 ರಿಂದ 200 ರೂ. ಬಿಲ್ ಬರುವಂತಹ ಮನೆಗಳಲ್ಲಿ 8 ರಿಂದ 10 ಸಾವಿರಗಳವರೆಗೆ ಬಿಲ್ ಬರುತ್ತಿದ್ದು, ಕಟ್ಟಲು ತಡವಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರಿಗೆ ವಿಶೇಷ ಭತ್ಯೆ, ವೇತನ ಹಾಗೂ ಅಗತ್ಯ ಸಂರಕ್ಷಣಾ ಕಿಟ್‍ಗಳನ್ನು ನೀಡಿ ಭದ್ರತೆ ನೀಡಬೇಕು. ಸ್ತ್ರೀ ಸಂಘಗಳ ಸಾಲ ಮನ್ನಾ ಮಾಡ ಬೇಕು. ಅಂಗವಿಕಲರು, ಹಿರಿಯ ನಾಗರಿಕರು, ವಿಧವಾ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಟಿ. ಗಣೇಶ್ ದಾಸಕರಿಯಪ್ಪ, ಕಡತಿ ಅಂಜನಪ್ಪ, ಎನ್. ಸೋಮು, ನಸೀಮಾ ಬಾನು ಸೇರಿದಂತೆ ಇತರರು ಪಾಲ್ಗೊಂಡಿದ್ದರು.