ಹರಪನಹಳ್ಳಿ, ಜೂ.22- ಪ್ರತಿ ಗ್ರಾಮ ಪಂಚಾಯ್ತಿ ಗೊಂದು ಗೋದಾಮು ನಿರ್ಮಿಸುವ ಕನಸಿದೆ. ಈ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ಅವರ ಜೊತೆ ಚರ್ಚಿಸುವುದಾಗಿ ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು. ಪಟ್ಟಣದ ಆಚಾರ್ಯ ಲೇಔಟ್ ನಲ್ಲಿರುವ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನ ಹಲುವಾಗಲು, ತೆಲಿಗಿ, ಹಾರಕ ನಾಳು ಗ್ರಾಮಗಳಲ್ಲಿ 2 ಸಾವಿರ ಮೆಟ್ರಿಕ್ ಟನ್ ತೂಕದ ಮತ್ತು ನಿಟ್ಟೂರು, ರಾಗಿಮಸಲವಾಡ, ಗೌರಿಪುರ, ನೀಲಗುಂದ ಗ್ರಾಮಗಳಲ್ಲಿ 1 ಸಾವಿರ ಮೆಟ್ರಿಕ್ ಟನ್ ತೂಕದ ಮೆಕ್ಕೆಜೋಳ ಸಂಗ್ರಹದ ಗೋದಾಮು ನಿರ್ಮಿಸುವಂತೆ ಮನವಿ ಮಾಡಿರುವುದಾಗಿ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮ ಗಾರಿಗಳು ಪೂರ್ಣಗೊಂಡಿದ್ದರೂ ಸಹ ಸಿಇಒ ಅವರು ಮಾಡಿದ ಕಾಮಗಾರಿಗಳ ಬಿಲ್‍ಗಳನ್ನು ತಡೆಹಿಡಿದಿ ದ್ದಾರೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾ ಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯ ಜಿಪಿಎಸ್ ಮೊಬೈಲ್ ಸಾಫ್ಟ್‍ವೇರ್ ಮತ್ತು ವಿಜಲ್ ಆಪ್ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಶೀಘ್ರದಲ್ಲೇ 2650 ಫಲಾನುಭವಿಗಳಿಗೆ ಅನುದಾನದ ಹಣವನ್ನು ಬಿಡುಗಡೆಗೊಳಿಸುವುದಾಗಿ ಮತ್ತು 2017-18ನೇ ಸಾಲಿಗೆ ಹರಪನಹಳ್ಳಿ ಪುರಸಭೆಗೆ ಹೆಚ್ಚುವರಿಯಾಗಿ ಹಾಗೂ ಪ್ರಸ್ತುತ ಯೋಜನೆಗಳಡಿ ನಿಗದಿಪಡಿಸಿದ ಗುರಿಯಂತೆ ಪ್ರಗತಿ ಸಾಧಿಸಲು ಇಂದಿರಾ ಆಪ್ ಮತ್ತು ಭುವನ್ ಆಪ್‍ನಲ್ಲಿ ಕಂಡು ಬಂದಿರುವ ತಾಂತ್ರಿಕ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸಲು ನಿಗಮದ ಅಧಿಕಾರಿಗಳಿಗೆ ಸೂಚಿಸುವುದಾಗಿ ವಸತಿ ಸಚಿವ ವಿ.ಸೋಮಣ್ಣನವರು ಸಹ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರ್ ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ತಾ.ಪಂ. ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಮುಖಂಡರಾದ ಎಂ.ಪಿ.ನಾಯ್ಕ, ಆರ್. ಕರೇಗೌಡ, ಯಡಿಹಳ್ಳಿ ಶೇಖರಪ್ಪ, ಬಾಗಳಿ ಕೊಟ್ರೇಶಪ್ಪ, ಕಲ್ಲೇರ ಬಸವರಾಜ, ಆರ್.ಲೋಕೇಶ್, ಎಸ್.ಪಿ.ಲಿಂಬ್ಯಾ ನಾಯ್ಕ, ಯು.ಪಿ.ನಾಗರಾಜ್, ರಾಘವೇಂದ್ರಶೆಟ್ಟಿ, ಎಂ.ಸಂತೋಷ್, ಕೆ.ಕೃಷ್ಣ ಸೇರಿದಂತೆ ಮತ್ತಿತರರಿದ್ದರು.