ದಾವಣಗೆರೆ, ಜೂ.21- ಪರೀಕ್ಷೆ ನಡೆಸದೇ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿ ಮೊನ್ನೆ ಎನ್ ಎಸ್ ಯುಐ ಸಂಘಟನೆ ಕಾರ್ಯಕರ್ತರು ನಡೆಸಿದ ಹೋರಾಟದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಈ ವಿಚಾರವಾಗಿ ಒತ್ತಡ ಹಾಕುವಂತೆ ವಾಟಾಳ್ ನಾಗರಾಜ್ ಅವರಿಗೆ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಕೊರೊನಾ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಸೋಂಕು ವಿದ್ಯಾರ್ಥಿಗಳಿಗೆ ಹರಡಿದರೆ ಆಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರಿ. ವಿದ್ಯಾರ್ಥಿಗಳು ಭಯದಲ್ಲಿ ಪರೀಕ್ಷೆ ಬರೆಯುವ ಸನ್ನಿವೇಶ ಎದುರಾಗಿದೆ. ಹೊರ ರಾಜ್ಯದಿಂದ ಕಂಟೈನ್ ಮೆಂಟ್ ವಲಯದಿಂದ ಪರೀಕ್ಷೆ ಬರೆಯಲು ಕೆಲ ವಿದ್ಯಾರ್ಥಿಗಳು ಬಂದಾಗ ಸೋಂಕು ಹರಡುವ ಸಂಭವ ಹೆಚ್ಚು ಎಂದು ಪ್ರತಿಭಟನಾ ನಿರತರು ಆತಂಕ ವ್ಯಕ್ತಪಡಿಸಿದರು.
ಎಲ್ಲಾ ಕಾಲೇಜುಗಳು ಆನ್ ಲೈನ್ ತರಗತಿಗಳಿಗೆ ಮೊರೆ ಹೋಗಿದ್ದು, 6 ತಿಂಗಳಾದರೂ ಪಠ್ಯ ಪೂರ್ಣಗೊಳಿಸಲು ಹರಸಾಹಸ ಪಡುವ ಶಿಕ್ಷಕರು ಕೇವಲ 2 ತಿಂಗಳಲ್ಲಿ ಆನ್ ಲೈನ್ ಪಠ್ಯ ಪೂರ್ಣಗೊಳಿಸಿರುವುದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗದೇ, ಸೋಂಕಿನ ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಮೊಹಮ್ಮದ್ ಮುಜಾಯಿದ್, ಎಸ್ ಎಫ್ ಐ ಪ್ರವೀಣ್, ಎಐಡಿಎಸ್ ಓ ರಾಜೇಂದ್ರ, ಜಿ.ಕೆ. ಚಂದನ್, ಅಮಿತ್, ಸಚಿನ್, ಆಕಾಶ್, ಚಂದನ್, ಪ್ರಜ್ವಲ್, ಸಂದೀಪ್, ಪುನೀತ್, ರಿಹಾನ್, ಮಲ್ಲಿಕ್, ಇಮ್ರಾಂನ್ ಖಾನ್, ರಿಹಾನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.