ಅತಿ ಹೆಚ್ಚು 111 ಪ್ರಕರಣಗಳನ್ನು ಹೊಂದಿದ್ದ ಪ್ರದೇಶವೀಗ ನಿರಾಳ
ದಾವಣಗೆರೆ, ಜೂ. 18 – ಜಿಲ್ಲೆಯಲ್ಲೇ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳನ್ನು ಕಂಡಿದ್ದ ಜಾಲಿನಗರ ಈಗ ಸೋಂಕು ಮುಕ್ತವಾಗಿದೆ.
ಒಂದು ಘಟ್ಟದಲ್ಲಿ 111 ಕೊರೊನಾ ಸೋಂಕು ಪ್ರಕರಣಗಳನ್ನು ಹೊಂದಿ, ನಾಲ್ಕು ಸಾವುಗಳನ್ನು ಕಂಡು ಕಳವಳಕ್ಕೆ ಕಾರಣವಾಗಿದ್ದ ಜಾಲಿನಗರ ದಲ್ಲಿ ಈಗ ಒಂದು ಪ್ರಕರಣವೂ ಇಲ್ಲ.
ಈ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಾಲಿನಗರದಲ್ಲಿ ಈಗ ಒಂದೂ ಪ್ರಕರಣವಿಲ್ಲ. ಎಲ್ಲರೂ ಗುಣಮು ಖರಾಗಿ ಬಿಡುಗಡೆಯಾಗಿದ್ದಾರೆ. ಕೊನೆಯ ಸೋಂಕಿತರು ಗುರುವಾರ ಗುಣವಾಗಿ ಬಿಡುಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಜಾಲಿನಗರ ಇನ್ನು ಮುಂದೆ ಕೊರೊನಾ ಮುಕ್ತವಾಗಿ ಮುಂದುವರೆ ಯಲಿದೆ ಎಂದು ಆಶಿಸುತ್ತೇನೆ, ಈ ಬಗ್ಗೆ ನಿಗಾ ವಹಿಸಿದ ತಂಡ ಅಭಿನಂದನೆಗೆ ಅರ್ಹವಾಗಿದೆ ಎಂದೂ ಅವರು ತಿಳಿಸಿದ್ದಾರೆ. ಸೋಂಕು ಪ್ರಕರ ಣಗಳಿಂದ ಜಾಲಿ ನಗರ ಮುಕ್ತವಾ ಗುತ್ತಿರು ವಂತೆಯೇ, ಕಂಟೈನ್ಮೆಂಟ್ ವಲಯ ಗಳೂ ಸಹ ಹಂತ ಹಂತವಾಗಿ ತೆರವಾಗುತ್ತಿವೆ.
ಈ ಭಾಗದಲ್ಲಿ ಒಟ್ಟು ಹತ್ತು ಕಂಟೈನ್ಮೆಂಟ್ ವಲಯಗಳಿದ್ದವು. ಅವುಗಳಲ್ಲಿ ಈಗಾಗಲೇ ಮೂರನ್ನು ತೆರವುಗೊಳಿಸಲಾಗಿದೆ. ಉಳಿದ ನಾಲ್ಕೈದು ಮುಂಬರುವ ದಿನಗಳಲ್ಲಿ ತೆರವಾಗಲಿವೆ ಎಂದು ಈ ವಲಯದ ಇನ್ಸಿಡೆಂಟ್ ಕಮಾಂಡೆಂಟ್ ಆಗಿರುವ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬಫರ್ ವಲಯ ಸೇರಿದಂತೆ ಇಡೀ ಜಾಲಿನಗರ ಪ್ರದೇಶದಲ್ಲಿ ಸೂಕ್ಷ್ಮ ವರ್ಗಕ್ಕೆ ಸೇರಿದ ಹತ್ತು ವರ್ಷದೊಳಗಿನವರು, ಹಿರಿಯರು, ಗರ್ಭಿಣಿಯರು ಮತ್ತಿತರರನ್ನು ನಿರಂತರವಾಗಿ ಐದು ದಿನಗಳಿಂದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅವರಲ್ಲಿಯೂ ಸಹ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಇದುವರೆಗೂ ಬಿಡುಗಡೆಯಾಗಿ ಬಂದ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದೂ ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕೊರೊನಾಗಿಂತ ಕಂಟೈನ್ಮೆಂಟೇ ಹೆಚ್ಚು : ಜಿಲ್ಲೆಯಲ್ಲಿ ಗುರುವಾರ ಎಂಟು ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಹಾಗೂ ಹೊಸದಾಗಿ ಮೂವರಲ್ಲಿ ಸೋಂಕು ಕಂಡು ಬಂದಿದೆ.
ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಇಳಿಕೆಯಾಗಿದೆ. ಆಸಕ್ತಿಕರ ಅಂಶ ಎಂದರೆ, ಕಂಟೈನ್ಮೆಂಟ್ ವಲಯಗಳ ಸಂಖ್ಯೆ 19 ಆಗಿದೆ.
ಕಂಟೈನ್ಮೆಂಟ್ ವಲಯಗಳನ್ನು ಯಾವುದೇ ಪ್ರಕರಣ ಕಂಡು ಬರದ 28 ದಿನಗಳ ನಂತರವೇ ತೆರವುಗೊಳಿಸಲಾಗುತ್ತಿದೆ. ಇದರಿಂದಾಗಿಯೇ ಸೋಂಕಿತರ ಬಿಡುಗಡೆ ಹಾಗೂ ಕಂಟೈನ್ಮೆಂಟ್ ತೆರವಿನ ನಡುವೆ ವ್ಯತ್ಯಾಸವಿದೆ.