ಅಪೂರ್ಣವಾಗಿರುವ ಆಶ್ರಯ ಮನೆಗಳ ಕಟ್ಟಡಗಳಿಗೆ ಹಣ ಬಿಡುಗಡೆಗೆ ಒತ್ತಾಯ

ಅಪೂರ್ಣವಾಗಿರುವ ಆಶ್ರಯ ಮನೆಗಳ ಕಟ್ಟಡಗಳಿಗೆ ಹಣ ಬಿಡುಗಡೆಗೆ ಒತ್ತಾಯ - Janathavaniಹರಪನಹಳ್ಳಿ, ಜೂ.17- ತಾಲ್ಲೂಕಿನಲ್ಲಿ 2017-18ನೇ ಸಾಲಿನಲ್ಲಿ ಮಂಜೂರಾದ ಸುಮಾರು 2,600 ಆಶ್ರಯ ಮನೆಗಳ ಕಟ್ಟಡ ನಿರ್ಮಾಣ ಅಪೂರ್ಣವಾಗಿದ್ದು, ಬಡ ಜನರು ವಸತಿ ಹೀನರಾಗಿ ಬಿಸಿಲು ಮಳೆ ಗಾಳಿಗೆ ರಕ್ಷಣೆಯಿಲ್ಲದೇ ತಗಡಿನ ಟೆಂಟ್‍ಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಒತ್ತಾಯಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಸತಿ ನಿವೇಶನ ಹಂಚಿಕೆ ಮೊತ್ತ ಪೂರ್ಣ ಬಿಡುಗಡೆಯಾಗಿಲ್ಲ. ಇದರ ಬಗ್ಗೆ ತಾಲ್ಲೂಕಿನ ಕಾರ್ಯ ನಿರ್ವಣಾಧಿಕಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರತಿಫಲ ದೊರೆತಿಲ್ಲ. ಕೋವಿಡ್-19 ಪ್ರಯುಕ್ತ ಹೆಚ್ಚು ಜನರನ್ನು ಸೇರಿಸಲು ಸಾಧ್ಯವಾಗದ ಕಾರಣ ತಾವೇ ಖುದ್ದು ವಸತಿ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಅಪೂರ್ಣಗೊಂಡಿರುವ ಮನೆಗಳ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.  

ಅಲ್ಲದೇ, ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಅವರು ತಾಲ್ಲೂಕಿಗೆ ಮೂರು ಬೃಹತ್ ಹಾಗೂ ಶಾಶ್ವತ ಅಭಿವೃದ್ಧಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈಗಾಗಲೇ 371 ಜೆ ಕಲಂ ಚಾಲನೆಯಲ್ಲಿದೆ. ಆದರೆ, ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ, ಗರ್ಭಗುಡಿ ಬ್ರಿಡ್ಜ್-ಕಂ-ಬ್ಯಾರೇಜ್ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿದ್ದು ತ್ವರಿತ ಗತಿಯಲ್ಲಿ ಸಾಗಲು ಜನ ಪ್ರತಿನಿಧಿಗಳು ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು. ಇಲ್ಲದಿದ್ದರೆ ತಾಲ್ಲೂಕಿನ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ನಾಳೆ ದಿನಾಂಕ 18 ರಂದು ಜರುಗುವ ಪಿಯು ಹಾಗೂ ಇದೇ ದಿನಾಂಕ 25 ರಂದು ಜರುಗುವ ಎಸ್ಎಸ್‌ಎಲ್‌ಸಿಯ 2,510 ವಿದ್ಯಾರ್ಥಿಗಳಿಗೆ ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್‌ ವತಿಯಿಂದ ಸ್ಯಾನಿಟೈಜರ್ ಮತ್ತು ಮಾಸ್ಕ್‌ಗಳನ್ನು  ವಿತರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಹೊಂಬಳಗಟ್ಟಿ ದಾದಾಪೀರ್, ಕೇದರನಾಥ ಸ್ವಾಮಿ, ಮನೋಜ, ವಕೀಲ ಸಿದ್ದಲಿಂಗನಗೌಡ್ರು ಸೇರಿದಂತೆ ಇತರರು ಇದ್ದರು.

error: Content is protected !!