ದಾವಣಗೆರೆ, ಜೂ.16- ಇದೇ 25 ರಿಂದ ಜುಲೈ 3 ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾ ರದ ನಿಯಮಾವಳಿಯಂತೆ ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಡಿಸ್ಇನ್ಫೆಕ್ಷನ್ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿ ಗಳು ಯಾವುದೇ ಅಭದ್ರತೆ, ಕಳವಳವಿಲ್ಲದೇ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗ ಭದ್ರಾ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎಸ್ಎಸ್ಎ ಲ್ಸಿ ಪರೀಕ್ಷೆ ಒಂದು ಸವಾಲಿನ ಮತ್ತು ವಿಶೇಷ ಪರೀಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಒಟ್ಟು 21683 ವಿದ್ಯಾರ್ಥಿಗಳು ಒಟ್ಟು 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ಒಂದು ಮಗು ಕೂಡ ಸಾರಿಗೆಯಿಲ್ಲದೇ ಪರೀಕ್ಷೆಯಿಂದ ವಂಚಿತರಾಗದಂತೆ ಸಂಬಂಧಿ ಸಿದ ಅಧಿಕಾರಿಗಳು ಕಾಳಜಿ ವಹಿಸಬೇಕು. ಇದೊಂದು ವಿಶೇಷ ಸಂದರ್ಭವಾಗಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿಯವರು ವಿಶೇಷ ವಾಗಿ ಮಕ್ಕಳನ್ನು ಪರೀಕ್ಷೆಗಳಿಗೆ ತೆರಳಲು ಕಳಕಳಿಯಿಂದ ವ್ಯವಸ್ಥೆ ಮಾಡಬೇಕೆಂದರು.
ಪ್ರತಿ ಪರೀಕ್ಷೆಗೆ ಮುನ್ನ ಒಟ್ಟು 7 ಬಾರಿ ಪ್ರತಿ ಕೊಠಡಿಗಳನ್ನು ಡಿಸ್ಇನ್ಫೆಕ್ಷನ್ ಮಾಡಲಾಗುವುದು. ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ, ಪಟ್ಟಣಗಳಲ್ಲಿ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳು ಹಾಗೂ ಗ್ರಾಮೀಣ ಭಾಗದಲ್ಲಿ ಅಲ್ಲಿನ ಸ್ಥಳೀಯ ಸಂಸ್ಥೆಗಳು ಪರೀಕ್ಷಾ ಕೇಂದ್ರಗಳನ್ನು ಡಿಎಸ್ಇ ನ್ಫೆಕ್ಷನ್ ಮಾಡುವ ಕೆಲಸ ಮಾಡಲಿದ್ದು, ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಯೋಜನೆ ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲಾ ಇಬ್ಬರು ಆರೋಗ್ಯ ಸಹಾಯಕರು-ಆಶಾ ಕಾರ್ಯಕರ್ತೆ ಯರನ್ನು(ಅಗತ್ಯ ಔಷಧಗಳೊಂದಿಗೆ)ನಿಯೋಜಿ ಸಲಾಗುವುದು. ಸ್ಕೌಟ್ ಮತ್ತು ಗೈಡ್ ವತಿಯಿಂದ ಸ್ಕೌಟರ್ ಮತ್ತು ಗೈಡರ್, ರೇಂಜರ್ ಮತ್ತು ರೋವರ್, ಕಬ್ ಮಾಸ್ಟರ್ ಮತ್ತು ಫ್ಲೋಕ್ ಲೀಡರ್ಗಳು ಸ್ವಯಂ ಸೇವಕರಾಗಿ ಪಾಲ್ಗೊಳ್ಳು ವರು. ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಒಟ್ಟು 22 ಸಾವಿರ ಮಾಸ್ಕ್ಗಳನ್ನು ನೀಡುತ್ತಿದ್ದು ಇದರೊಂದಿಗೆ ಪ್ರತಿ ತಾಲ್ಲೂಕಿನ ತಹಶೀಲ್ದಾರರು ತಲಾ 5 ಸಾವಿರ ಮಾಸ್ಕ್ಗಳನ್ನು ನೀಡುವಂತೆ ಸಭೆಯಲ್ಲಿ ತಿಳಿಸಿದ ಅವರು ತಾಲ್ಲೂಕುಗಳಲ್ಲಿ ವಿವಿಧ ಸಂಘ-ಸಂಸ್ಥೆಗಳವರು ಮಾಸ್ಕ್ ವಿತರಣೆ ಮಾಡಲು ಮುಂದೆ ಬಂದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಾಲ್ನಡಿಗೆಯಲ್ಲಿ 6,174 ವಿದ್ಯಾರ್ಥಿಗಳು, ಪೋಷಕರ ಸಹಾಯ ದಿಂದ 1,2581, ಕೆಎಸ್ಆರ್ಟಿಸಿ ಬಸ್ ಮೂಲಕ 229, ಖಾಸಗಿ ಶಾಲಾ ವಾಹನಗಳ ವ್ಯವಸ್ಥೆ ಮೂಲಕ 1,690, ಹಾಸ್ಟೆಲ್ನಲ್ಲಿ ತಂಗಿ ಪರೀಕ್ಷೆ ಬರೆಯುವವರು 674, ವ್ಯಾಸಂಗ ಮಾಡುತ್ತಿರುವ ಶಾಲಾ ವಾಹನಗಳಲ್ಲಿ 335 ಸೇರಿದಂತೆ ಒಟ್ಟು 21,683 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ
ಮಂಡಳಿಯಿಂದ ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಅರ್ಧ ಲೀಟರ್ ಬಾಟಲ್ಗಳನ್ನು ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರಬರಾಜು ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144ನೇ ಸೆಕ್ಷನ್ ಜಾರಿಗೊಳಿಸಿ ಜೆರಾಕ್ಸ್ ಮತ್ತು ಸೈಬರ್ ಕೆಫೆ ಮುಚ್ಚಿಸಲು ಕ್ರಮ ವಹಿಸಲಾ ಗುವುದು. ಹಾಗೂ ವಾಟ್ಸಾಪ್ ಇತರೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯಾರ್ಥಿಗಳು ಶಾಲೆಗಳಲ್ಲಿರುವ ಶೌಚಾ ಲಯಗಳನ್ನು ಬಳಸದಂತೆ ಮುಂಜಾಗ್ರತೆಯಾಗಿ ಮನೆಯಲ್ಲೇ ಶೌಚವನ್ನು ಮುಗಿಸಿಕೊಂಡು ಬರುವುದು ಒಳ್ಳೆಯದು. ಶಾಲೆಗಳಲ್ಲಿ ಶೌಚಾಲ ಯಗಳನ್ನು ಸ್ವಚ್ಚ ಮಾಡಿಸಿ, ಡಿಸ್ಇನ್ಫೆಕ್ಷನ್ ಮಾಡುವಂತೆ ಸೂಚಿಸಲಾಗಿದೆ. ಆದಾಗ್ಯೂ ಕೋವಿಡ್ ಹಿನ್ನೆಲೆಯಲ್ಲಿ ಆದಷ್ಟು ಮಕ್ಕಳು ಸಾರ್ವಜನಿಕ ಶೌಚಾಲಯ ಬಳಸದಂತೆ ಕ್ರಮ ವಹಿಸಿದರೆ ಸೂಕ್ತ ಎಂದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಿಯಮದಂತೆ ಎಲ್ಲ 93 ಪರೀಕ್ಷಾ ಕೇಂದ್ರಗಳಲ್ಲಿ ಅಡ್ಡ ಮತ್ತು ಉದ್ದವಾಗಿ ಮೂರು ಅಡಿ ಅಂತರದಲ್ಲಿ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಒಂದು ಡೆಸ್ಕ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ಕೂರುತ್ತಾರೆ. ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ನೀರಿನ ವ್ಯವಸ್ಥೆ ಮಾಡಿದ್ದರೂ ಮಕ್ಕಳು ಮನೆಯಿಂದ ಬಾಟಲಿಯಲ್ಲಿ ನೀರು ತಂದರೆ ಒಳಿತು ಎಂದು ತಿಳಿಸಲಾಗಿದೆ ಎಂದರು.
ನಗರದಲ್ಲಿ ಕಂಟೈನ್ಮೆಂಟ್ ಜೋನ್ನಿಂದ 90 ವಿದ್ಯಾರ್ಥಿಗಳು ಇದ್ದಾರೆಂದು ಗುರುತಿಸಲಾಗಿದೆ. ಇವರಿಗೆ ಎನ್95 ಮಾಸ್ಕ್ ನೀಡಬೇಕಿದೆ ಎಂದರು. ಜೊತೆಗೆ ಒಟ್ಟು 1300 ಕೊಠಡಿ ಇದ್ದು ಪ್ರತಿ ಕೊಠಡಿಗೆ ಒಂದು ಸ್ಯಾನಿಟೈಸರ್ ನೀಡಬೇಕು ಎಂದು ಮನವಿ ಮಾಡಿದರು. ಡಿಸಿಯವರು ಪ್ರತಿಕ್ರಿಯಿಸಿ ಇತ್ತೀಚೆಗೆ ಕೆಲವು ಕಂಟೈನ್ಮೆಂಟ್ ಝೋನ್ಗಳನ್ನು ಡಿನೋಟಿಫೈ ಮಾಡಲಾಗಿದೆ. ಆದ್ದರಿಂದ ಈ ಪಟ್ಟಿಯನ್ನು ಪರಿಷ್ಕರಿಸುವಂತೆ ತಿಳಿಸಿದ ಅವರು ಡಿಹೆಚ್ಓ ರವರು ಎನ್95 ಮಾಸ್ಕ್, ಥರ್ಮಲ್ ಸ್ಕ್ಯಾನರ್ಗಳು ಹಾಗೂ 1500 ಸ್ಯಾನಿಟೈಸರ್ ಬಾಟಲ್ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಸಿಇಒ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಎಎಸ್ಪಿ ರಾಜೀವ್, ಸಹ ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ವೀರಣ್ಣ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಇತರರಿದ್ದರು.