ದಾವಣಗೆರೆ, ಜೂ. 12 – ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ದಾವಣ ಗೆರೆ ಉಪ ವಿಭಾಗಾಧಿಕಾರಿ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಲು ಹಾಗೂ ಇದಕ್ಕಾಗಿ ಹೊಸ ಕಟ್ಟಡ ನಿರ್ಮಿಸಲು ಸಿದ್ಧತೆಗಳು ಆರಂಭವಾಗಿವೆ.
ಉಪ ವಿಭಾಗಾಧಿಕಾರಿ ಕಚೇರಿ ಹಳೆಯದಾಗಿದ್ದು, ಅದಕ್ಕೆ ಹೊಸ ಕಟ್ಟಡದ ಅಗತ್ಯವಿತ್ತು. ಇದರ ಜೊತೆಗೆ ರೈಲ್ವೆ ನಿಲ್ದಾಣದ ಆಧುನೀಕರಣಕ್ಕೆ ಹೆಚ್ಚಿನ ಜಾಗದ ಅಗತ್ಯವಿತ್ತು.
ಈ ಹಿನ್ನೆಲೆಯಲ್ಲಿ ಉಪವಿಭಾಗಾ ಧಿಕಾರಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಹಾಗೂ ರೈಲ್ವೆ ನಿಲ್ದಾಣಕ್ಕೆ ಜಾಗವನ್ನು ಬಿಟ್ಟುಕೊಡ ಬೇಕು ಎಂಬ ಪ್ರಸ್ತಾಪವಿತ್ತು.
ರೈಲ್ವೆ ಖಾತೆ ಅಧೀನ ಸಚಿವ ಸುರೇಶ್ ಅಂಗಡಿ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲಿಸಿದ್ದರು. ರಾಜ್ಯ ಸರ್ಕಾರ ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಂಡರೆ ನಗರದ ಜನತೆಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರಸ್ತಾಪಿತ ನೂತನ ಕಟ್ಟಡಕ್ಕೆ ನೀಲನಕ್ಷೆ ರೂಪಿಸಲಾಗುತ್ತಿದೆ. ಈ ಕಟ್ಟಡದಲ್ಲಿ ಸಿಬ್ಬಂದಿಗಳ ಕೊಠಡಿ, ಕೋರ್ಟ್ ಹಾಲ್, ಸಭಾಂಗಣ, ವಿಶ್ರಾಂತಿ ಕೊಠಡಿ, ಕಂಪ್ಯೂಟರ್ ಸೆಕ್ಷನ್ ಸೇರಿದಂತೆ ಅಗತ್ಯ ಎಲ್ಲ ಸೌಲಭ್ಯಗಳೂ ಇರಲಿವೆ.
– ಮಮತಾ ಹೊಸಗೌಡರ್, ಉಪ ವಿಭಾಗಾಧಿಕಾರಿ
ಉಪ ವಿಭಾಗಾಧಿಕಾರಿ ಕಚೇರಿಯನ್ನು ನೂತನವಾಗಿ ನಿರ್ಮಿಸಲಾಗುತ್ತಿರುವ ತಹಶೀ ಲ್ದಾರ್ ಕಚೇರಿಯ ಮೂರನೇ ಅಂತಸ್ತಿಗೆ ವರ್ಗಾಯಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆಯುವ ಕಲಾಪಗಳಲ್ಲಿ ಹೆಚ್ಚು ಜನರು ಭಾಗಿಯಾಗುವುದರಿಂದ, ಮೂರನೇ ಮಹಡಿ ಸೂಕ್ತವಾಗದು ಎಂಬ ಅಭಿಪ್ರಾಯ ಮೂಡಿ ಬಂದಿತ್ತು.
ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲೇ ನೂತನ ಉಪ ವಿಭಾಗಾಧಿಕಾರಿ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ಶುಕ್ರವಾರದಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಂಸದ ಜಿ.ಎಂ.ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣಉಕಾಚಾರ್ಯ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಜಿಲ್ಲಾಡಳಿತ ಭವನದ ಪಕ್ಕದಲ್ಲಿ ನಿರ್ಮಿಸಲು ಪ್ರಸ್ತಾಪಿಸಿರುವ ನೂತನ ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು. ನೂತನ ಕಟ್ಟಡ ನಿರ್ಮಾಣದ ಕುರಿತು ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ವಿವರ ನೀಡಿದ್ದಾರೆ.