ಮಲೇಬೆನ್ನೂರು, ಜೂ. 10- ಗುಡ್ಡದ ಬೇವಿನಹಳ್ಳಿಯ ಗುಡ್ಡದಲ್ಲಿ ಉಪ ತಹಶೀಲ್ದಾರ್ ಆರ್. ರವಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ, ರೈತರೊಬ್ಬರು ತನ್ನ ಜಮೀನು ಪಕ್ಕದ ಸರ್ಕಾರಿ ಗೋಮಾಳ ಒತ್ತುವರಿ ಮಾಡುತ್ತಿದ್ದ ಕಾಮಗಾರಿಯನ್ನು ತಡೆಹಿಡಿದ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ಗುಡ್ಡದಲ್ಲಿನ ಸ.ನಂ. 22ಪಿ/10ರಲ್ಲಿ ರೈತರೊಬ್ಬರ ಹೆಸರಿಗೆ 3 ಎಕರೆ ಜಮೀನಿತ್ತು. ಈ ರೈತ ತನ್ನ ಹೊಲದ ಪಕ್ಕದ ಸರ್ಕಾರಿ ಗೋಮಾಳದ ಜಮೀನನ್ನು ಜೆಸಿಬಿಯಿಂದ ಸಮತಟ್ಟು ಮಾಡುತ್ತಿದ್ದ. ಇದೇ ವೇಳೆ ದಾಳಿ ನಡೆಸಿದ ಉಪತಹಶೀಲ್ದಾರ್ ಆರ್. ರವಿ, ಆರ್.ಐ. ಸಮೀರ್ ಅಹ್ಮದ್, ಗ್ರಾಮ ಲೆಕ್ಕಾಧಿಕಾರಿ ಸುಬಾನಿ, ಒತ್ತುವರಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು. ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿದ ರೈತ, ಹೊಲಕ್ಕೆ ಹೋಗಲು ರಸ್ತೆ ಇರಲಿಲ್ಲ. ರಸ್ತೆ ಮಾಡುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.