ಮಲೇಬೆನ್ನೂರು, ಜೂ.9- ಕೊರೊನಾ ಸೋಂಕಿತ ಪೊಲೀಸ್ ಪೇದೆ ಇತ್ತೀಚೆಗೆ ಭೇಟಿ ನೀಡಿದ್ದ ಪಟ್ಟಣದ ಗೌಸ್ ನಗರದ ಸಂಬಂಧಿಕರ ಮನೆಯ 14 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.
ಮಲೇಬೆನ್ನೂರಿನ ಸಮುದಾಯ ಆರೋಗ್ಯದಲ್ಲಿ ತೆಗೆದುಕೊಂಡಿದ್ದ 7 ಜನರ ಗಂಟಲು ದ್ರವ ಪರೀಕ್ಷೆ ವರದಿ ಮಂಗಳವಾರ ನೆಗೆಟಿವ್ ಬಂದಿದೆ ಎಂದು ಗೊತ್ತಾಗಿದೆ. ಉಳಿದ 7 ಜನರ ಗಂಟಲು ದ್ರವ ಪರೀಕ್ಷೆಯನ್ನು ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಅವರ ವರದಿ ಇನ್ನೂ ಬರಬೇಕಿದೆ. 14 ಜನರಿರುವ 2 ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ದೇವರಬೆಳಕೆರೆ : ಗ್ರಾಮದಲ್ಲಿರುವ ಮಗನ ಮನೆ ಯಿಂದ ದಾವಣಗೆರೆಯ ಬಸವರಾಜಪೇಟೆಯಲ್ಲಿರುವ ಮತ್ತೊಬ್ಬ ಮಗನ ಮನೆಗೆ ಹೋಗಿದ್ದ ತಾಯಿ ಕೆಲ ದಿನಗಳ ನಂತರ ಅನಾರೋಗ್ಯದ ಕಾರಣ ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿ ದ್ದರು. ಈ ಘಟನೆ ವಾರದ ಹಿಂದೆ ನಡೆದಿತ್ತು ಎನ್ನಲಾಗಿದೆ.
ಮೃತ ವೃದ್ಧೆಯ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದ ಕಾರಣ ವೃದ್ಧೆಯ ಅಂತ್ಯಸಂಸ್ಕಾರದಲ್ಲಿ ದೇವರಬೆಳಕೆರೆಯಿಂದ ಮಗ, ಸೊಸೆ, ಮತ್ತಿತರರು ಭಾಗಿಯಾಗಿದ್ದರಿಂದ ಅವರು ಸೇರಿದಂತೆ ಅವರ ಸಂಬಂಧಿಕರ 14 ಜನರನ್ನು ದಾವಣಗೆರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮಂಗಳವಾರ ಅವರ ಗಂಟಲು ದ್ರವ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದು, 14 ಜನರ ಪೈಕಿ 11 ಜನರನ್ನು ಮಂಗಳವಾರ ಸಂಜೆ ದೇವರಬೆಳಕೆರೆಗೆ ವಾಪಸ್ ಕಳುಹಿಸಲಾಗಿದೆ. ಉಳಿದ 3 ಜನರು ಚಿಗಟೇರಿ ಆಸ್ಪತ್ರೆಯಲ್ಲಿದ್ದು ಅವರನ್ನು ಬುಧವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
14 ಜನರ ವರದಿ ನೆಗೆಟಿವ್ ಬಂದಿರುವುದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದೇವರ ಬೆಳಕೆರೆ ಗ್ರಾಮದ ಪತ್ರಿಕಾ ವಿತರಕ ಬೇರೆ ಊರಿಗೆ ಹೋಗಿ ಪತ್ರಿಕೆ ಹಾಕುತ್ತಿದ್ದರು. ಈ ಘಟನೆಯಿಂದಾಗಿ ಪತ್ರಿಕೆ ಹಾಕುವ ಹುಡುಗನನ್ನು ಕೆ. ಬೇವಿನಹಳ್ಳಿ ಮತ್ತಿತರೆ ಹಳ್ಳಿಗಳ ಜನರು ಸದ್ಯ ಪತ್ರಿಕೆ ಹಾಕಲು ಬಾರದಂತೆ ತಿಳಿಸಿದ್ದರು.
ಕೊರೊನಾ ಭೀತಿ ಜನರಿಂದ ಯಾವಾಗ ದೂರವಾಗುತ್ತ ದೆಯೋ ಎಂಬುದು ಯಕ್ಷ ಪ್ರಶ್ನೆ ಆಗಿ ಎಲ್ಲರನ್ನೂ ಕಾಡುತ್ತಿದೆ.