ಹೈಕಮಾಂಡ್ ತೀರ್ಮಾನವೇ ಅಂತಿಮ: ಭೈರತಿ ಬಸವರಾಜ್
ದಾವಣಗೆರೆ, ಜೂ.9- ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡಲು ಹೈಕಮಾಂಡ್ ತೀರ್ಮಾನಿಸಿದ್ದು, ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಇಂದು ನಗರದ ಸರ್ಕ್ಯೂಟ್ ಹೌಸ್ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಬಿಜೆಪಿ ಹೈಕಮಾಂಡ್ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಯಾರನ್ನೂ ಕಡೆಗಣಿಸಿಲ್ಲ. ಎಲ್ಲರಿಗೂ ರಾಜ್ಯಸಭಾ ಟಿಕೆಟ್ ಬೇಕು ಎಂಬ ಆಸೆ ಇರುತ್ತೆ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಯಾವ ಬಂಡಾಯ, ಅಸಮಾಧಾನವೂ ಇಲ್ಲ. ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಹಾಗೂ ಪ್ರಭಾಕರ್ ಕೋರೆಯವರು ಟಿಕೆಟ್ ಕೇಳಿದ್ದರು. ಕೋರೆಯವರ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಇಲ್ಲವೆಂದು ಅವರೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಹತ್ತು ಜನರು ಗುಣಮುಖರಾಗಿ ಬಿಡುಗಡೆಯಾಗುತ್ತಾರೆ. ನಾಳೆ 13 ಜನ ಬಿಡುಗಡೆಯಾಗಲಿದ್ದಾರೆ. ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ದಾವಣಗೆರೆ ಜಿಲ್ಲಾಡಳಿತ, ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಪ್ರಾರಂಭ ಮಾಡುತ್ತೇವೆ. ಈಗಿರುವ ಎರಡು ಲ್ಯಾಬ್ ಗಳಿಗೆ ಪ್ರತಿನಿತ್ಯ 150 ರಿಂದ 200 ಮಾದರಿಗಳನ್ನು ಕಳಿಸಲಾಗುತ್ತಿದೆ ಎಂದು ಹೇಳಿದರು.