ಬ್ಯಾಂಕ್ ಸಾಲಕ್ಕೆ ರೈತರಿಂದ ಎನ್‌ಒಸಿ ಕೇಳುವಂತಿಲ್ಲ

ದಾವಣಗೆರೆ,  ಜೂ. 8-   ಯಾವ ಬ್ಯಾಂಕಿನಲ್ಲೂ  ಎನ್.ಒ.ಸಿ ಕೇಳುತ್ತಿಲ್ಲ. ಆದರೆ ಕೆಲವು ನಿರ್ದಿಷ್ಟ ಕಾರಣಗಳಿಗಷ್ಟೇ ಎನ್.ಒ.ಸಿ ಬೇಕಾಗಿದೆ. ಈ ಕುರಿತು ಲೀಡ್ ಬ್ಯಾಂಕ್‍ಗಳಿಗೆ  ಮಾರ್ಗದರ್ಶನ ಮಾಡಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕೊರೊನಾ ಸಂದರ್ಭದಲ್ಲಿ ರೈತರಿಗೆ ಉಂಟಾಗಿರುವ ಸಂಕಷ್ಟದ ಕುರಿತು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಮುಖಂಡರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ರಿಸರ್ವ್ ಬ್ಯಾಂಕ್ ಎನ್.ಒ.ಸಿ ಅಗತ್ಯವಿಲ್ಲ
ಎಂದು ಹೇಳಿದ್ದರೂ, ಬ್ಯಾಂಕ್ ಸಾಲಕ್ಕೆ ಎನ್.ಒ.ಸಿ ಕೇಳಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡುತ್ತಾ, ಎನ್.ಒ.ಸಿ ಬಗ್ಗೆ ಪ್ರಚಾರ ಮಾಡಬೇಕು. ಯಾವ ಬ್ಯಾಂಕ್‍ನಲ್ಲೂ ರೈತರ ಸಾಲಗಳಿಗೆ ಎನ್.ಒ.ಸಿ ಅವಶ್ಯಕತೆಯಿಲ್ಲ ಎಂಬುದರ ಬಗ್ಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ  ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ, ತೋಟಗಾರಿಕೆ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಹಾಗೂ ಬೆಂಬಲ ಬೆಲೆ ನೀಡುವಿಕೆ, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು, ಕೃಷಿ ಬೆಳೆಗಳ ಖರೀದಿ ಕೇಂದ್ರಗಳ ಸ್ಥಾಪನೆ, ಬ್ಯಾಂಕ್‍ಗಳಿಂದ ಕೃಷಿಗೆ ಸಂಬಂಧಿಸಿದಂತೆ ಸಾಲ ಮಂಜೂರಾತಿ ಹಾಗೂ ವಸೂಲಾತಿ ಕ್ರಮಗಳ ಕುರಿತು, ಅರಣ್ಯ ಇಲಾಖೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ, ಪರಿಸರ ಇಲಾಖೆಗೆ ಸಂಬಂಧಿಸಿದ ವಿಷಯ, ಅಡಿಕೆ ಬೆಳೆಗಳಿಗೆ ಮಂಗಗಳ ಹಾವಳಿ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು  ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ರೈತರ ಸಂಕಷ್ಟದಲ್ಲಿ ಜಿಲ್ಲಾಡಳಿತ ನಿಮ್ಮೊಂದಿಗಿದೆ. ಕಾಲ ಕಾಲಕ್ಕೆ ನಿಮ್ಮೆಲ್ಲರ ಸಲಹೆ, ಸೂಚನೆ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನೀವು ಕೂಡ ನಮ್ಮ ಕೆಲಸದ ಅಂಗವಾಗಿದ್ದೀರಿ. ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ನಿಮ್ಮ ಸಹಕಾರ ಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ, ಮುದಗಲ್, ತೋಟಗಾರಿಕಾ ಉಪನಿರ್ದೇಶಕ ಲಕ್ಷ್ಮೀಕಾಂತ್ ಮತ್ತು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಚಿಕ್ಕನಹಳ್ಳಿ ರೇವಣ ಸಿದ್ದಪ್ಪ, ಬಲ್ಲೂರು ಪರಶುರಾಮ ರೆಡ್ಡಿ, ಲಿಂಗಾರೆಡ್ಡಿ, ಆನಗೋಡು ಭೀಮಣ್ಣ ಇತರರು ಇದ್ದರು.

error: Content is protected !!