ದಾವಣಗೆರೆ, ಜೂ. 8- 2019-20 ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಕೋವಿಡ್-19 ಲಾಕ್ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ರೂ. 5 ಸಾವಿರ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಕ್ಡೌನ್ನಿಂದಾಗಿ ಮುಸುಕಿನ ಜೋಳ ಬೆಳೆ ಬೇಡಿಕೆ ಕಳೆದುಕೊಂಡಿತ್ತು. ಇದ ರಿಂದಾಗಿ ಮುಸುಕಿನ ಜೋಳ ಬೆಳೆದ
ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮುಸುಕಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು ನೀಡುವುದು ಅವಶ್ಯಕವಾಗಿದೆ ಎಂದರು.
ತಾಲ್ಲೂಕುಗಳಿಂದ ಪರಿಹಾರ ನೀಡಲು ತಯಾರಿಸಿರುವ ರೈತರುಗಳ ಪಟ್ಟಿಯನ್ನು ಪರಿಹಾರ ನೀಡುವ ಸಲುವಾಗಿ ಅನುಮೋದಿಸಬೇಕು. ತಾಲ್ಲೂಕು ಮಟ್ಟದ ಸಮಿತಿಯೊಂದಿಗೆ ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಿಗಧಿತ ಅವಧಿಯಲ್ಲಿ ಯೋಜನೆಯಡಿ ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರದ ಇ-ಆಡಳಿತದ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಪಾವತಿಸಬೇಕು. ಜೊತೆಗೆ ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಮುಸುಕಿನ ಜೋಳ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಕಚೇರಿಯ ನಾಮಫಲಕದಲ್ಲಿ ಪ್ರದರ್ಶಿಸಬೇಕು. ಸದರಿ ಪಟ್ಟಿಯಲ್ಲಿ ದಾಖಲಾಗದೇ ಇರುವ ಮುಸುಕಿನ ಜೋಳ ಬೆಳೆಗಾರರಿದ್ದಲ್ಲಿ, ಅಂತಹ ರೈತರಿಂದ ಅರ್ಜಿ ಪಡೆಯಬೇಕು ಎಂದು ಯೋಜನೆ ಕುರಿತು ವಿವರಿಸಿದರು.
ಬೆಳೆ ಸಮೀಕ್ಷೆಯಲ್ಲಿ ದಾಖಲಾಗದಿದ್ದಲ್ಲಿ ಅಂತಹ ರೈತರಿಂದ ಅರ್ಜಿ ಪಡೆದು ಹೋಬಳಿ ಮಟ್ಟದಲ್ಲಿ ಕೃಷಿ ಅಧಿಕಾರಿ. ಸಹಾಯಕ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರನ್ನು ಒಳಗೊಂಡ ತಂಡವನ್ನು ರಚಿಸಿ ಕೃಷಿ ಬೆಳೆಗಳ ತಾಲ್ಲೂಕುಗಳನ್ನು ಪರಿಶೀಲಿಸಿ, ಸ್ಥಳೀಯವಾಗಿ ಪಂಚನಾಮೆ ಮಾಡಿಕೊಂಡು ಪರಿಹಾರ ವಿತರಿಸಲು ತಾಲ್ಲೂಕು ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಬೇಕು ಎಂದು ತಿಳಿಸಿದರು.
ಕೃಷಿ ಜಂಟಿ ಸಹಾಯಕ ನಿರ್ದೇಶಕ ಶರಣಪ್ಪ ಮುದಗಲ್, ತಹಶೀಲ್ದಾರ್ ಗಿರೀಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.