ಪ್ರತಿ ತಾಲ್ಲೂಕಿನಲ್ಲಿಯೂ ಭತ್ತದ ಖರೀದಿ ಕೇಂದ್ರ ತೆರೆಯಲಿ

ರೈತ ಮುಖಂಡ ನಾಗೇಶ್ವರರಾವ್‌ ಆಗ್ರಹ

ದಾವಣಗೆರೆ, ಜು.7- ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿಯೂ ಸರ್ಕಾರ ಭತ್ತದ ಖರೀದಿ ಕೇಂದ್ರವನ್ನು ತೆರೆಯಲೆಂದು ರೈತ ಮುಖಂಡ ನಾಗೇಶ್ವರರಾವ್ ಆಗ್ರಹಪಡಿಸಿದರು.

ಅವರು ಇಂದು ಬೆಳವನೂರಿನ ತಮ್ಮ ಗೃಹದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಕಳೆದ ವರ್ಷ ಭತ್ತದ ದರ 1,800 ರಿಂದ 1,900 ರೂ ವರೆಗೆ ಇತ್ತು. ಆದರೆ ಈ ವರ್ಷ 1,400 ರವರೆಗೆ ಕುಸಿದಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಎಪಿಎಂಸಿಯಲ್ಲಿ ರೈತರ ಶೋಷಣೆ ನೆಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಸಚಿವರು ರೈತರ ಸಂಕಷ್ಟ ವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರೈತರ ಮನೆ ಬಾಗಿಲಿಗೆ ಹೋಗಿ ಭತ್ತವನ್ನು ಖರೀದಿಸುವ ಕ್ರಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ ಮಾತನಾಡಿ, ಕೈಗಾರಿಕೋದ್ಯಮಿಗಳಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡುವ ಸರ್ಕಾರ ರೈತರಿಗೆ ಸೌಲಭ್ಯ ನೀಡುವಲ್ಲಿ ಮೀನಾ ಮೇಷ ಎಣಿಸುತ್ತಿದೆ ಎಂದು ದೂರಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್‌ ಮಾತನಾಡಿ, ಭತ್ತಕ್ಕೆ 1,868 ರೂಗಳ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದ್ದು, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಭತ್ತದ ಕೇಂದ್ರಗಳನ್ನು ತೆರೆಯಬೇಕು. 3,45,000 ಟನ್ ಭತ್ತ ಬೆಳೆಯು ತ್ತಿದ್ದರೂ ಎಪಿಎಂಸಿಗೆ ಕೇವಲ 1 ಲಕ್ಷ ಟನ್ ಭತ್ತ ಮಾತ್ರ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಪಿಎಂಸಿಯಲ್ಲಿ ರೈತರಿಗೆ ಆಗುತ್ತಿರುವ ವಂಚನೆ ತಪ್ಪಿಸಲು ಸಾಧ್ಯವಾಗುತ್ತಿಲ್ಲ. 100 ಚೀಲ ಭತ್ತದಲ್ಲಿ 3 ಚೀಲ ಭತ್ತ ತಳಗಾಳು ರೂಪದಲ್ಲಿಯೇ ರೈತರು ನೀಡಬೇಕಾ ಗುತ್ತಿದೆ. ಇದರ ಜೊತೆಗೆ ದಲ್ಲಾಲಿ ಯನ್ನೂ ಮುರಿದುಕೊಳ್ಳಲಾಗುತ್ತಿದೆ. ಇದರಿಂದ ಶೇ. 16 ರಷ್ಟು ನಷ್ಟವಾಗುತ್ತಿದೆ ಎಂದು ದೂರಿದರು.

ಅನೇಕ ಕಡೆ ಇರುವ ಉಗ್ರಾಣಗಳು ಖಾಲಿಯಾಗಿದ್ದು, ಭತ್ತವನ್ನು ಉಗ್ರಾಣಗಳಲ್ಲಿ ಭರ್ತಿ ಮಾಡಬೇಕು. ಉಗ್ರಾಣದ ಬಳಿಯೇ ರೈತರಿಂದ ಭತ್ತವನ್ನು ಖರೀದಿಸುವ ಕೆಲಸ ಆಗಬೇಕು ಎಂದು ಆಗ್ರಹಪಡಿಸಿದರು.

ಭತ್ತ ಮತ್ತು ಮೆಕ್ಕೆಜೋಳದ ಖರೀದಿ ಕೇಂದ್ರಗಳನ್ನು ವ್ಯವಸ್ಥಿತವಾಗಿ ತೆರೆಯಬೇಕೆಂದು ಜೂ. 8 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರೈತ ಮುಖಂಡರು ಸರ್ಕಾರದ ಗಮನ ಸೆಳೆಯಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಾಡದ ಆನಂದರಾಜ್, ಹದಡಿ ನಿಂಗಪ್ಪ, ಹದಡಿ ಹಾಲಪ್ಪ, ಆಲೂರು ನಿಂಗರಾಜ್, ತಿಪ್ಪಣ್ಣ ಮತ್ತಿತರರಿದ್ದರು.

error: Content is protected !!