ಹೊನ್ನಾಳಿ, ಜೂ.7- ಲಾಕ್‍ಡೌನ್ ಕಾರಣದಿಂದಾಗಿ ಮಾರ್ಚ್ ಮೂರನೇ ವಾರದಿಂದ ಬಂದ್ ಆಗಿದ್ದ ತಾಲ್ಲೂಕಿನ ಎಲ್ಲಾ ದೇವಸ್ಥಾನಗಳು ನಾಡಿದ್ದು ದಿನಾಂಕ 8ರ ಸೋಮವಾರದಿಂದ ತೆರೆಯಲಿವೆ. ಈ ಹಿನ್ನೆಲೆಯಲ್ಲಿ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದುಕೊಳ್ಳಲು ಅನುಕೂಲ ಆಗುವಂತೆ ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಚೌಕಾಕಾರದ ಬಾಕ್ಸ್‍ಗಳನ್ನು ಬರೆಸಿದರು.
ಆಗಮಿಸುವ ಭಕ್ತರಿಗೆ ತೀರ್ಥ-ಪ್ರಸಾದ ನೀಡುವಂತಿಲ್ಲ, ಅರವತ್ತು ವರ್ಷ ಮೇಲ್ಪಟ್ಟವರು, ಹತ್ತು ವರ್ಷ ಒಳಗಿನವರು, ಗರ್ಭಿಣಿಯರು, ಕಾಯಿಲೆಗಳಿಂದ ನರಳುತ್ತಿರುವವರು ದೇವಸ್ಥಾನಕ್ಕೆ ಆಗಮಿಸುವಂತಿಲ್ಲ. ಈ ಕುರಿತು ಅರ್ಚಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ದೇವಸ್ಥಾನ, ಸೊರಟೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆಯ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಈ ಎಲ್ಲಾ ನಿಯಮಗಳು ಇತರೆ ದೇವಸ್ಥಾನಗಳಿಗೂ ಅನ್ವಯಿಸುತ್ತವೆ ಎಂದು ಮಾಹಿತಿ ನೀಡಿದರು.
ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ರಾಜುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.