ಸರ್ಕಾರದ ನೆರವಿಗೆ ಸರ್ಕಾರಿ ನೌಕರರ ಒಂದು ದಿನದ ವೇತನ

ದಾವಣಗೆರೆ, ಜೂ.3- ಕೊರೊನಾ ಸಂಕಷ್ಟದಲ್ಲಿ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿ ಸರ್ಕಾರದ ನೆರವಿಗೆ ನಿಂತಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಲ್ಲಾ ನೌಕರರ ಒಂದು ದಿನದ ವೇತನ 100 ಕೋಟಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಡಿ ದರ್ಜೆಯ ನೌಕರರಿಂದ ಹಿಡಿದು ಉನ್ನತಾಧಿಕಾರಿಗಳವರೆಗೆ ಎಲ್ಲರೂ ಸಹಾಯ ಹಸ್ತ ಚಾಚಿದ್ದಾರೆ. ಸರ್ಕಾರಿ ನೌಕರರು ಕೊರೊನಾ ಸಂಕಷ್ಟದಲ್ಲಿ ಚೆಕ್‌ಪೋಸ್ಟ್‌, ಕಂಟೈನ್ ಮೆಂಟ್‌ ಝೋನ್‌ ಸೇರಿದಂತೆ ಇತರೆಡೆ ಜೀವ ಲೆಕ್ಕಿಸದೆ ಕೆಲಸ ಮಾಡಿದ್ದಾರೆ ಎಂದ ಅವರು, ಹಳೆ ಪಿಂಚಣಿ ಜಾರಿ ಸೇರಿದಂತೆ ನೌಕರರ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸ್ಪಂದಿಸುವುದಾಗಿ ಮಾತು ಕೊಟ್ಟಿದೆ ಎಂದರು.

ಕೊರೊನಾದ ಸಂಕಷ್ಟ ಕುರಿತ ‘ಕೊರೊನಾ ಇದು ಸರಿನಾ’ ಧ್ವನಿ ಸುರುಳಿಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಉಮೇಶ್‌ ಅವರು ಸಾಹಿತ್ಯ ರಚಿಸಿದ್ದು, ಸುಂದರವಾಗಿ ಮೂಡಿ ಬಂದಿದೆ. ಡಾ. ಉಮೇಶ್‌ ಅವರು ಉತ್ತಮ ಸಾಹಿತ್ಯ ರಚಿಸಿದ್ದಾರೆ. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಉಮೇಶ್‌, ಕೊರೊನಾ ತಂದ ಆಪತ್ತು ಕಂಡು ಅದರ ಬಗ್ಗೆ ಹಾಡು ರಚಿಸಲು ಪ್ರೇರಣೆಯಾಯಿತು ಎಂದರು. ಇಲ್ಲಿನ ಹರ ಮ್ಯೂಸಿಕಲ್‌ ವರ್ಲ್ಡ್‌ ನ ಸುನೀಲ್‌ ಮೈರಾ ಸಂಗೀತ ನಿರ್ದೇಶಿಸಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ, ಖಜಾಂಚಿ ಕಲ್ಲೇಶಪ್ಪ, ರಾಜ್ಯಪರಿಷತ್‌ ಸದಸ್ಯ ಮಾರುತಿ, ಜಿಲ್ಲಾ ಗೌರವ ಅಧ್ಯಕ್ಷ ಉಮೇಶ್‌, ಕಾರ್ಯದರ್ಶಿ  ಶಿವಣ್ಣ, ನಿವೃತ್ತ ನೌಕರ ಗಿರಿಧರ ಸೇರಿದಂತೆ ಇತರರಿದ್ದರು.

error: Content is protected !!