ರಾಜ್ಯದ ಎಲ್ಲಾ ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಮುಖ್ಯಮಂತ್ರಿ ಧಾವಿಸಲಿ

ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಒತ್ತಾಯ

ದಾವಣಗೆರೆ, ಮೇ 3- ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ಮಾತ್ರ ಮುಖ್ಯಮಂತ್ರಿಗಳಾಗಬಾರದು. ರಾಜ್ಯದ ಎಲ್ಲಾ ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.

ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯಲಾಗಿದ್ದು, ರೈತರು ಇನ್ನೂ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಹಾಕುವ ಮೊದಲೇ ಅದರ ಪ್ರಕ್ರಿಯೆ ಮುಗಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಮಾತ್ರ ಹೆಚ್ಚು ಖರೀದಿ ಮಾಡುವ ಮೂಲಕ ಬೇರೆ ಜಿಲ್ಲೆ ಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸರ್ಕಾರ ಮೆಕ್ಕೆಜೋಳವನ್ನು ಖರೀದಿ ಮಾಡುವ ಮೂಲಕ ರೈತರ ರಕ್ಷಣೆಗೆ ನಿಲ್ಲಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು. 

ರಾಜ್ಯದಲ್ಲಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರ ಹಿತಕಾಯುವಲ್ಲಿ ವಿಫಲವಾಗಿದೆ. ಈಗಾಗಲೇ ಮೆಕ್ಕೆ ಜೋಳ ಖರೀದಿ ಪ್ರಕ್ರಿಯೆ ಮುಗಿಸಿದ್ದು, ಇನ್ನಾದರೂ ಅದರ ಅವಧಿ ವಿಸ್ತರಿಸುವಂತೆ ಆಗ್ರಹಿಸಿದರು.

  • ತರಕಾರಿ ಬೆಳೆಗಾರರಿಗೂ ಸಹ ನೆರವು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ನಲ್ಲಿ ಅಡಿಕೆ ಬೆಳೆಯಲಾಗಿದ್ದು, ಮಳೆಗೆ ಬೆಳೆಯೆಲ್ಲಾ ನಷ್ಟವಾಗಿದೆ. ಸರ್ಕಾರ ಎಕರೆಗೆ ಐದು ಸಾವಿರ ಕೊಡುವುದಾಗಿ ಹೇಳಿದ್ದು, ಇದುವರೆಗೂ ರೈತರ ಖಾತೆಗೆ ಈ ಹಣ ಸಂದಾಯವಾಗಿಲ್ಲ.

ಕೆಎಂಎಫ್‍ನಿಂದ ಮೇ 9ಕ್ಕೆ ಮೆಕ್ಕೆಜೋಳ ಖರೀದಿ ಆರಂಭಿಸಲಾಗಿದ್ದು, ಮೇ 16ಕ್ಕೆ ಖರೀದಿ ಪ್ರಕ್ರಿಯೆ ಮುಗಿಸಲಾಗಿದೆ. ರೈತರ ಪಾಲಿಗೆ ಕೆಎಂಎಫ್ ಖರೀದಿ ಅನುಕೂಲವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ 2.50 ಲಕ್ಷ ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿದೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುತ್ತಿದೆ. ಆದರೆ, ಅದಕ್ಕಿಂತ ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡಲಾಗುತ್ತಿದೆ. ಸೋನಾ ಮಸೂರಿ ಭತ್ತ 1400 ರೂ.ಗೆ ವರ್ತಕರು ಕೇಳುತ್ತಿದ್ದಾರೆ. ಈ ವಿಚಾರವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಘೋಷಿಸಿದ ಪ್ಯಾಕೇಜ್ ಗಳು ರೈತರ ಸಂಕಷ್ಟದ ಸಮಯದಲ್ಲಿ ದೊರೆತಿಲ್ಲ. ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಪ್ರಬಲರಾಗಿಲ್ಲದ ಕಾರಣ ಬಂದ ಅನುದಾನಗಳು ಹಾಗೂ ಸೌಲಭ್ಯಗಳು ಅಕ್ಕಪಕ್ಕದ ಜಿಲ್ಲೆಗಳ ಪಾಲಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಯಾವ ಶಾಸಕರೂ ರೇಶನ್ ಕಿಟ್ ವಿತರಣೆ ಮಾಡಿಲ್ಲ ಎಂದು ಆಕ್ಷೇಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಆನಗೋಡು ಭೀಮಣ್ಣ, ರೇವಣಸಿದ್ದಪ್ಪ ಚಿಕ್ಕನ ಹಳ್ಳಿ, ಪಾಮೇನಹಳ್ಳಿ ಲಿಂಗರಾಜ್, ಸಿ.ಟಿ. ನಿಂಗಪ್ಪ, ಎಂ. ಪರಶುರಾಮ್ ಸೇರಿದಂತೆ ಇತರರು ಇದ್ದರು. 

error: Content is protected !!