ರೈತರ ಸಮಸ್ಯೆಗೆ ಸ್ಪಂದಿಸಿದ ಕೃಷಿ ಸಚಿವರು : ಜಿ.ಪಂ. ಸದಸ್ಯೆ ಜಯಶೀಲ ಮೆಚ್ಚುಗೆ

ರೈತರ ಸಮಸ್ಯೆಗೆ ಸ್ಪಂದಿಸಿದ ಕೃಷಿ ಸಚಿವರು : ಜಿ.ಪಂ. ಸದಸ್ಯೆ ಜಯಶೀಲ ಮೆಚ್ಚುಗೆ - Janathavaniಹರಪನಹಳ್ಳಿ, ಜೂ.2- ಎಕರೆಗೆ 8 ಕೆಜಿ ಬಿತ್ತನೆ ಬೀಜ ನೀಡುವಂತೆ ಮಾಡಿದ ಮನವಿಗೆ ಸಕಾರಾತ್ಮಾಕವಾಗಿ ಸ್ಪಂದಿಸಿ ಇದೇ ಮುಂಗಾರಿನಲ್ಲಿ ಪ್ರತಿ ಎಕರೆಗೆ 8 ಕೆಜಿ ಬಿತ್ತನೆ ಬೀಜ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸಚಿವ ಬಿ.ಸಿ.ಪಾಟೀಲ್‌  ಆದೇಶ ನೀಡಿದ್ದಾರೆ ಎಂದು ತೆಲಗಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರೀಮತಿ ಕೆ.ಆರ್. ಜಯಶೀಲ ತಿಳಿಸಿದ್ದಾರೆ. 

ಇತ್ತೀಚೆಗೆ ತಾಲ್ಲೂಕಿನ ತೆಲಿಗಿ ಕ್ಷೇತ್ರದ ರೈತರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ, ಹೆಸರು, ತೊಗರಿ, ಮೆಕ್ಕೆಜೋಳ ಸೇರಿದಂತೆ ಇತರೆ ಬಿತ್ತನೆ ಬೀಜಗಳ ವಿತರಣೆ ಕಾರ್ಯಕ್ರಮವಿತ್ತು. ಅಲ್ಲಿಯ ರೈತರು ಸರ್ಕಾರ ಖರೀದಿ ಕೇಂದ್ರಗಳಲ್ಲಿ 5 ಎಕರೆಗೆ 5 ಕೆಜಿ ಇರುವ ಮೂರು ಪ್ಯಾಕೆಟ್‍ಗಳನ್ನು ನೀಡುತ್ತಿರುವುದರಿಂದ ಸಮರ್ಪಕವಾಗಿ ಬಿತ್ತನೆ ಮಾಡಲಾಗದೆ ಖಾಸಗಿ ಕೇಂದ್ರಗಳಲ್ಲಿ ಬೀಜ ತರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೆಲಗಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಯಶೀಲ ಅವರು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಯಶೀಲ ಅವರು ತಕ್ಷಣ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಸ್ಥಳದಲ್ಲೇ ಫೋನ್ ಕರೆ ಮಾಡಿ ಇರುವ ಸಮಸ್ಯೆಗಳನ್ನು ವಿವರಿಸಿ, ಮುಂದಿನ ವರ್ಷದಲ್ಲಿಯಾದರೂ ಎಕರೆಗೆ 8 ಕೆಜಿ ಬಿತ್ತನೆ ಬೀಜ ನೀಡುವಂತೆ ಮನವಿ ಮಾಡಿದರು. ಸಚಿವರು ಸಕಾರಾತ್ಮಾಕವಾಗಿ ಸ್ಪಂದಿಸಿ, ರೈತರಿಗೆ ಈ ಯೋಜನೆಯ ಗರಿಷ್ಠ 5 ಎಕರೆ  ಅಥವಾ ವಾಸ್ತವಿಕ  ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಒಂದು ಬೆಳೆಯ ಬಿತ್ತನೆ ಬೀಜವನ್ನು  ವಿತರಿಸಿ ಎಂದು ಆದೇಶ ನೀಡಲಾಗಿದ್ದು, ತಕ್ಷಣ ರೈತರ ಹಾಗೂ ಜನ ಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಕೃಷಿ ಸಚಿವರ ಕಾರ್ಯ ವೈಖರಿಯನ್ನು ಜಯಶೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!