ಖರೀದಿ ಕೇಂದ್ರ ಔಪಚಾರಿಕ ಕ್ರಿಯೆಯಾಗದಿರಲಿ : ತೇಜಸ್ವಿ

ದಾವಣಗೆರೆ, ಜೂ.2- ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭತ್ತ ಖರೀದಿ ಕೇಂದ್ರ ಎನ್ನುವುದು ಔಪಚಾರಿಕ ಕ್ರಿಯೆಯಾಗುವುದರ ಬದಲು ರೈತರ ಸಂಕಷ್ಟಕ್ಕೆ ನೆರವಾದ ಕಾರ್ಯಕ್ರಮ ಎನಿಸಬೇಕಿದೆ ಎಂಬ ಅಭಿಪ್ರಾಯವನ್ನು ಹೊಸಕೆರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ವಿ. ಪಟೇಲ್ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲ ತಿಂಗಳುಗಳಿಂದ ಕೆಲವೆಡೆ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕೇಂದ್ರಗಳಿಗೆ ಭತ್ತ ನೀಡಲು ಮುಂದೆ ಬಂದಿರುವ ರೈತರ ಸಂಖ್ಯೆ ತೀರಾ ಕಡಿಮೆ ಇದೆ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಬಯಸುವವರಿಗೆ ವಿಧಿಸಲಾಗಿರುವ ನಿಬಂಧನೆಗಳು ಮತ್ತು ಪ್ರಮಾಣದಲ್ಲಿನ ಮಿತಿ ರೈತರ ನಿರಾಸಕ್ತಿಗೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

ರೈತರೊಬ್ಬರಿಗೆ ಪ್ರಮಾಣದಲ್ಲಿ ಯಾವುದೇ ಮಿತಿ ಇರಬಾರದು. ಗುಣಮಟ್ಟದಲ್ಲಿ ವಿಧಿಸುವ ಷರತ್ತುಗಳಲ್ಲಿ ರಿಯಾಯ್ತಿ ಅಪೇಕ್ಷಿಸುವುದಿಲ್ಲ. ಮಾರಾಟದ ಅವಕಾಶ ಮುಕ್ತ ಮತ್ತು ಸಹಜವಾಗಿರಬೇಕು. ಖರೀದಿ ಕೇಂದ್ರಕ್ಕೆ ಕಾಲಾವಧಿ ಮಿತಿ ಇರಬಾರದು. ಕೇಂದ್ರಗಳನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸಬೇಕು. ಅಕ್ಕಿ ಗಿರಣಿ ಮಾಲೀಕರ ಮನವೊಲಿಸಿ ಖರೀದಿ ಕೇಂದ್ರದ ಯೋಜನೆಯಲ್ಲಿ ಸಕ್ರೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಹಾಗೂ ಕೇಂದ್ರಗಳನ್ನು ಖಟಾವಿಗಿಂತ ಮುನ್ನವೇ ತೆರೆಯಬೇಕು ಇತ್ಯಾದಿ ಬೇಡಿಕೆಗಳನ್ನು ಪಟೇಲ್ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಭತ್ತಕ್ಕೆ 2,500 ರೂ., ಮೆಕ್ಕೆಜೋಳಕ್ಕೆ 1,700 ರೂ. ದರ ಸಿಗುವಂತಹ ವಾತಾವರಣ ನಿರ್ಮಾಣವಾಗಲು ಅಗತ್ಯವೆನಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಕೋರಿದ್ದಾರೆ.

error: Content is protected !!