ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಆತಂಕ ಬೇಡ

ವಿದ್ಯಾರ್ಥಿ, ಪೋಷಕರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್

ದಾವಣಗೆರೆ, ಜೂ. 2- ವಿದ್ಯಾರ್ಥಿ ಗಳು ಯಾವುದೇ ಆತಂಕವಿಲ್ಲದೆ ಎಸ್‍ಎಸ್‍ಎಲ್‍ಸಿ  ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾಗವಂತೆ ಶಿಕ್ಷಕರು, ಶಿಕ್ಷಣ ಇಲಾಖೆ ಅಗತ್ಯವಾದ ಸಿದ್ದತೆ ನಡೆಸಿಕೊಳ್ಳುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಸೂಚಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂ.25 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಪ್ರತಿಯೊಬ್ಬ ಪರೀಕ್ಷಾರ್ಥಿ ಪರೀಕ್ಷೆ ಬರೆಯವುದರಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

18 ರಿಂದ 20 ವಿದ್ಯಾರ್ಥಿಗಳು ಒಂದು ಕೊಠಡಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಗುವುದು. ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಇವುಗಳನ್ನ ವಿತರಣೆ ಮಾಡಲಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ
ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್-19 ವೈರಾಣು ಸೋಂಕು ತಡೆ ಕುರಿತು ಅರಿವು ಮೂಡಿಸಬೇಕು. ಸಾಮಾಜಿಕ ಅಂತರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪರೀಕ್ಷಾ ಸಮಯಕ್ಕೂ ಮೊದಲೇ ಹಾಜರಿದ್ದು, ಪ್ರತಿ ಪರೀಕ್ಷಾರ್ಥಿಯನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಕಡ್ಡಾಯ ಹಾಕಬೇಕು. ಹಾಗೂ ಕರ್ತವ್ಯ ನಿರತ ಶಿಕ್ಷಕರು ಪದೇ ಪದೇ ಸ್ಯಾನಿಟೈಸರ್ ಉಪಯೋಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಶಾಲಾ ಬಸ್ ವ್ಯವಸ್ಥೆ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಖಾಸಗಿ ಶಾಲಾ ವಾಹನ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಬಸ್ ಸಂಚಾರ ಇಲ್ಲದಿರುವೆಡೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ಬಿಡಬೇಕು. ಬಳಿಕ ಅವರ ಕೇಂದ್ರ ಸ್ಥಾನದಿಂದ ಪುನಃ ಕರೆದುಕೊಂಡ ಹೋಗಬೇಕು ಎಂದರು.  

ಕ್ವಾರಂಟೈನ್ ಕೇಂದ್ರಗಳಾಗಿರುವ ಶಾಲೆಗಳು: ಬಹುತೇಕ ಜಿಲ್ಲೆಗಳಲ್ಲಿ ಹಾಗೂ ಗಡಿಭಾಗದಲ್ಲಿನ ಶಾಲೆಗಳು ಕ್ವಾರಂಟೈನ್ ಕೇಂದ್ರಗಳಾಗಿದ್ದವು. ಆದರೆ ಇದೀಗ ಅಂತಹ ಶಾಲೆಗಳು ಪರೀಕ್ಷಾ ಕೇಂದ್ರಗಳಾಗಿದ್ದಲ್ಲಿ ಅವುಗಳನ್ನು ಮೂರು ದಿನಗಳ ಮುಂಚಿತವಾಗಿ ಡಿಸ್‍ಇನ್‍ಫೆಕ್ಷನ್ ಮಾಡಬೇಕು. ಜಿಲ್ಲೆಯಲ್ಲಿ ಆ ರೀತಿ ಯಾವ ಶಾಲೆಯಿಲ್ಲ. ಜಾಲಿನಗರದ ದುರ್ಗಾಬಿಂಕಾ ಶಾಲೆಯೂ ಕಂಟೈನ್ ಮೆಂಟ್ ಜೋನ್‌ಗೆ ಒಳಪಟ್ಟಿತ್ತು. ಅದರ ಬದಲಿಗೆ ಪೂರಕ ಶಾಲೆ ಗೊತ್ತು ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಪರೀಕ್ಷೆಗೆ ಯಾವುದೇ ಭಂಗವಾಗದಂತೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿ ಜಿಲ್ಲೆಗೆ ಉತ್ತಮ ಹೆಸರು ಬರುವಂತೆ ನೋಡಿಕೊಳ್ಳಲಾಗುವುದು ಎಂದರು.

ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 435 ಸರ್ಕಾರಿ ಶಾಲೆಗಳಿದ್ದು, 1150 ಕೊಠಡಿಗಳ ವ್ಯವಸ್ಥೆ ಇದೆ, ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ ಎಂದರು.

ಸಭೆಯಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹಾಲೇಶಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ  ಮಂಜುನಾಥ್, ಎಲ್ಲಾ ಕಸ್ಟೋಡಿಯನ್, ಮುಖ್ಯ ಅಧಿಕ್ಷಕರು, ಜಿಲ್ಲೆಯ ಪ್ರೌಢಶಾಲಾ ಮುಖ್ಯೊಪಾಧ್ಯಾಯರು ಉಪಸ್ಥಿತರಿದ್ದರು.

error: Content is protected !!