ರಾಜನಹಳ್ಳಿ ಭೀಮಾನಂದ್ ನಿಧನ

ರಾಜನಹಳ್ಳಿ ಭೀಮಾನಂದ್ ನಿಧನ - Janathavaniದಾವಣಗೆರೆ,ಜೂ.1- ದಾನ – ಧರ್ಮಗಳಿಗೆ ಮತ್ತೊಂದು ಹೆಸರಿನಂತಿ ರುವ ನಗರದ ಪ್ರತಿಷ್ಠಿತ ರಾಜನಹಳ್ಳಿ ಮನೆತನದವರೂ, ಹೆಸರಾಂತ ವರ್ತಕರೂ, ಸಮಾಜ ಸೇವಕರೂ ಆದ ರಾಜನಹಳ್ಳಿ ಭೀಮಾನಂದ್ ಅವರು ಇಂದು ಮಧ್ಯಾಹ್ನ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭೀಮಾನಂದ್ ಅವರಿಗೆ ಸುಮಾರು 79 ವರ್ಷ ವಯಸ್ಸಾಗಿತ್ತು. 

ಧರ್ಮಪತ್ನಿ – ವಿವಿಧ ಸಾಮಾಜಿಕ ಸಂಸ್ಥೆಗಳ ಸಕ್ರಿಯ ಪದಾಧಿಕಾರಿಯಾಗಿರುವ ಶ್ರೀಮತಿ ಕಲಾ ಭೀಮಾನಂದ್, ಇಬ್ಬರು ಪುತ್ರರಾದ ರಾಜೇಂದರ್ ಮತ್ತು ವಿನಾಯಕ್ ಹಾಗೂ ಅಪಾರ ಬಂಧು-ಬಳಗ ವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 2ರ ಮಗಳವಾರ ಬೆಳಿಗ್ಗೆ 10.30ಕ್ಕೆ ಸ್ಥಳೀಯ ಪಿ.ಬಿ. ರಸ್ತೆಯಲ್ಲಿರುವ ವೈಕುಠಧಾಮದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಪರಿಚಯ : ಧರ್ಮ ರತ್ನಾಕರ ದಿ. ರಾಜನಹಳ್ಳಿ ಮುದ್ದೂರಾಯಪ್ಪ ಅವರ ಸಹೋದರ ದಿ. ರಾಜನಹಳ್ಳಿ ಲಕ್ಷ್ಮಣ ಶೆಟ್ಟಿ ಅವರ ನಾಲ್ಕನೇ ಪುತ್ರರಾದ ರಾಜನಹಳ್ಳಿ ಭೀಮಾನಂದ್ ಅವರು ಬೆಂಗಳೂರಿನಲ್ಲಿ ಎಂ.ಕಾಂ ಪದವಿ ಪಡೆದು, ನಂತರ ತಮ್ಮ ಮನೆತನದ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಚಿಕ್ಕಮಗಳೂರಿನ ಹೆಸರಾಂತ ಮೈಸೂರು ಮನೆತನದ ಆರ್ಯಮೂರ್ತಿ ಮತ್ತು ಶ್ರೀಮತಿ ಸಾವಿತ್ರಮ್ಮ ದಂಪತಿಯ ಪುತ್ರಿ ಕಲಾವತಿ ಅವರೊಂದಿಗೆ ಮದುವೆಯಾಗಿದ್ದರು. ಶ್ರೀಮತಿ ಕಲಾ ಭೀಮಾನಂದ್ ಅವರು ವನಿತಾ ಸಮಾಜ, ವಾಸವಿ ಮಹಿಳಾ ಸಂಘ ಸೇರಿದಂತೆ ಅನೇಕ ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯ ಪದಾಧಿಕಾರಿಗಳಾಗಿದ್ದಾರೆ.

ಭೀಮಾನಂದ್ ಅವರು ತಮ್ಮ ತಂದೆ ಮತ್ತು ದೊಡ್ಡಪ್ಪ ಆರಂಭಿಸಿದ್ದ ಅಶೋಕ ಚಿತ್ರಮಂದಿರವನ್ನು ನವೀಕರಣಗೊಳಿಸಿ ಸುದೀರ್ಘ 40 ವರ್ಷಗಳ ಕಾಲ ಸಿನಿಮಾ ಮಂದಿರದ ವಹಿವಾಟನ್ನು ನಡೆಸಿದ್ದಾರೆ. ರಾಜನಹಳ್ಳಿ ಇಂಡಸ್ಟ್ರಿಯಲ್
 ಎಂಟರ್ ಪ್ರೈಸಸ್, ಸನ್ ಮ್ಯಾಕ್ ಎಂಟರ್ ಪ್ರೈಸಸ್, ಆರ್. ಲಕ್ಷ್ಮಣ ಶೆಟ್ಟಿ ಅಂಡ್ ಕೋ, ಲಕ್ಷ್ಮಣ್ ಕೆಮಿಕಲ್ಸ್ ಸಂಸ್ಥೆಗಳ ಪಾಲುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ವಾಣಿಜ್ಯೋದ್ಯಮದ ಜೊತೆ – ಜೊತೆಗೆ ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಗರದ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿ, ಶ್ರೀ ಗುರುಶಾಂತಾಶ್ರಮದ ಕಾರ್ಯದರ್ಶಿಯಾಗಿ, ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ, ರಾ.ಲ. ಕಾಯ್ದೆ ಕಾಲೇಜಿನ ಛೇರ್ಮನ್ ಆಗಿ, ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ದೊಡ್ಡಪ್ಪನವರಾಗಿದ್ದ ಧರ್ಮರತ್ನಾಕರ ರಾಜನಹಳ್ಳಿ ಮುದ್ದೂರಾಯಪ್ಪ  ಅವರು ದಾನ ಮಾಡಿದ್ದ ಧ.ರಾ.ಮ. ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ  ಛೇರ್ಮನ್ ಆಗಿ, ರಾಜನಹಳ್ಳಿ ಮುದ್ದೂರಾಯಪ್ಪ ಲಕ್ಷ್ಮಣ ಶೆಟ್ಟಿ ಟ್ರಸ್ಟಿನ ಅಧ್ಯಕ್ಷರಾಗಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಟ್ರಸ್ಟಿಯಾಗಿ, ಸ್ಕೌಟ್ಸ್ – ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಹಿರಿಯರು ಹಾಕಿಕೊಟ್ಟ ಪರಂಪರೆಯಂತೆ ಭೀಮಾನಂದ್ ಅವರೂ ಸಹ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದರು. ಅನೇಕ ಸಂಘ – ಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಿದ್ದರು. ಭೀಮಾನಂದ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರಗತಿ ಪಬ್ಲಿಕ್ ಟ್ರಸ್ಟ್ ವತಿಯಿಂದ `ವೈಶ್ಯ ರತ್ನ’ ಬಿರುದು ನೀಡಿ ಸನ್ಮಾನಿಸಿ, ಗೌರವಿಸಲಾಗಿತ್ತು. 

ಸ್ಕೌಟ್ಸ್ – ಗೈಡ್ಸ್ ಸಂತಾಪ : ಭೀಮಾನಂದ್ ಅವರ ನಿಧನಕ್ಕೆ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮಾನಂದ್ ಅವರ ನಿಧನದಿಂದ ಈ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ. ಚಿಗಟೇರಿ, ಬೂಸ್ನೂರ್ ವಿಶ್ವನಾಥ್ ಶೋಕ ವ್ಯಕ್ತಪಡಿಸಿದ್ದಾರೆ.

error: Content is protected !!