ದಾವಣಗೆರೆ, ಜೂ.1- ನಗರದ ಇಂದಿರಾ ಕ್ಯಾಂಟಿನ್ ಮುಂಭಾಗದಲ್ಲಿನ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಓರ್ವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಭಾರತ್ ಕಾಲೋನಿಯ 4ನೇ ಕ್ರಾಸ್ ವಾಸಿ ಉಮೇಶ್ ಕತ್ತಿ (36) ಬಂಧಿತ ಆರೋಪಿಯಾಗಿದ್ದು, ಈತ ಭಾನುವಾರ ರಾತ್ರಿ ಜಿಲ್ಲಾ ಚಿಗಟೇರಿ ಆಸ್ಪತ್ರೆ ಹಾಗೂ
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿನ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದವರು ಹೇಳಿದರು.
ವೀರ ಸಾವರ್ಕರ್ ಅಭಿಮಾನಿಯಾಗಿರುವ ಆರೋಪಿ, ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ಕಾಂಗ್ರೆಸ್ ಮತ್ತು ಕೆಲ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ದೇಶ ಭಕ್ತರಾದ ವೀರ ಸಾವರ್ಕರ್ ಹೆಸರಿಡಲು ವಿರೋಧಿಸಿದವರು ಫಿರೋಜ್ ಗಾಂಧಿಯವರ ಹೆಂಡತಿ ಇಂದಿರಾ ಗಾಂಧಿ ಹೆಸರನ್ನು ಕ್ಯಾಂಟಿನ್‌ಗೆ ಇಟ್ಟಿದ್ದಲ್ಲದೆ, ಫೋಟೋ ಸಹ ಹಾಕಿದ್ದಾರೆ. ಆದ್ದರಿಂದ ಇಂದಿರಾ ಗಾಂಧಿ ಭಾವಚಿತ್ರ ವಿರೂಪಗೊಳಿಸಿದ್ದಾಗಿ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಹನುಮಂತರಾಯ ಹೇಳಿದರು.
ಆರೋಪಿ ಕತ್ತಿ ಮೊದಲು ಕೆಎಸ್ಸಾರ್ಟಿಸಿ ಸಮೀಪದ ಕ್ಯಾಂಟಿನ್ ಬಳಿ ಇಂದಿರಾ ಗಾಂಧಿ ಭಾವಚಿತ್ರ ವಿರೂಪಗೊಳಿಸಿ ನಂತರ ಬೈಕ್ ಮೂಲಕ ಜಿಲ್ಲಾ ಜಿಗಟೇರಿ ಆಸ್ಪತ್ರೆಯ ಕ್ಯಾಂಟಿನ್ ಬಳಿಯ ಭಾವಚಿತ್ರವನ್ನೂ ವಿರೂಪಗೊಳಿಸಿದ್ದಾನೆ. ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದವರು ತಿಳಿಸಿದರು.
ಆರೋಪಿ ವಿರುದ್ಧ 2011ರಲ್ಲಿ ನಗರ ಪೊಲೀಸ್ ಠಾಣೆ, ದಾವಣಗೆರೆ ಆರ್.ಎಂ.ಸಿ. ಯಾರ್ಡ್ ಠಾಣೆ, ಬಸವನಗರ ಠಾಣೆಗಳಲ್ಲೂ ದೂರುಗಳು ದಾಖಲಾಗಿವೆ. ಆದರೆ ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ ಎಂದು ತಿಳಿದು ಬಂದಿರುವುದಾಗಿ ಹೇಳಿದರು.
ನಗರ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್, ವೃತ್ತ ನಿರೀಕ್ಷಕ ತಿಮ್ಮಣ್ಣ, ಕೆಟಿಜೆ ನಗರ ಪಿಎಸ್‌ಐ ಆರ್.ವೀರೇಶ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.