ಹರಪನಹಳ್ಳಿ, ಮೇ 30- ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಒಂದು ವರ್ಷದ ಆಡಳಿತದಲ್ಲಿ ಹಿಂದಿನ ಸರ್ಕಾರಗಳು ದಶಕಗಳಿಂದಲೂ ಮಾಡಲಾಗದ ಸಾಧನೆಯನ್ನು ಮಾಡಿದೆ ಎಂದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಇಡೀ ವಿಶ್ವವೇ ಮೆಚ್ಚುವಂತಹ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.
ಸರ್ಜಿಕಲ್ ಸ್ಟ್ರೈಕ್ನಂತಹ ದಿಟ್ಟ ಹೆಜ್ಜೆ ಇಟ್ಟು ಶತ್ರು ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಿ, ಅನ್ಯ ದೇಶಗಳಿಗೂ ನಮ್ಮ ದೇಶದ ಬಲಿಷ್ಠತೆಯನ್ನು ತಿಳಿಯುವಂತೆ ಮಾಡಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳ ಸಹಕಾರದೊಂದಿಗೆ ಲಾಕ್ಡೌನ್ಗೆ ಕರೆ ನೀಡಿ ಜನತೆಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಕೊರೊನಾ ಹಿಮ್ಮೆಟ್ಟಿಸುವಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ 17,249 ಕೋಟಿಯಷ್ಟು ನೆರವಿನ ರೂಪದ ಕೇಂದ್ರೀಯ ಅನುದಾನ. 2019-20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ 10,079 ಕೋಟಿ ರೂ., 1869 ಕೋಟಿ ಪ್ರವಾಹ ಪರಿಹಾರ, ಕರ್ನಾಟಕದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರ, ಕಲ್ಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ, ಶಿವ ಮೊಗ್ಗ ವಿಮಾನ ನಿಲ್ದಾಣ ಅಭಿವೃದ್ದಿ ಸೇರಿದಂತೆ ಅನೇಕ ಯೋಜನೆಗಳಿಗೆ ಮೋದಿ ಅವರು ನೆರವು ನೀಡಿದ್ದಾರೆ.
ಘೋಷಣೆ : ಬೆಳಗಾವಿ-ಧಾರವಾಡ, ಮೈಸೂರು-ಕುಶಾಲನಗರ, ಶಿಕಾರಿಪುರ- ರಾಣೇಬೆನ್ನೂರು, ಕೋಲಾರದಲ್ಲಿ 495 ಕೋಟಿ ರೂ.ಗಳ ವೆಚ್ಚದಲ್ಲಿ ರೈಲ್ವೆ ವರ್ಕ್ ಶಾಪ್ ಸೇರಿದಂತೆ 2022ರ ವೇಳೆಗೆ ಕರ್ನಾಟಕದಲ್ಲಿ ಎಲ್ಲಾ ಮಾರ್ಗಗಳ ಡಬ್ಲಿಂಗ್ ಮತ್ತು ವಿದ್ಯುದೀಕರಣದ ನಿರ್ಧಾರ ಸೇರಿದಂತೆ ಹತ್ತು ಹಲವು ಯೋಜನೆ ಗಳನ್ನು ಕರ್ನಾಟಕಕ್ಕೆ ನೀಡಿದ್ದಾರೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ, ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಬಿಜೆಪಿ ಎಸ್ಟಿ ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್, ವಕೀಲ ಕೆಂಗಳ್ಳಿ ಪ್ರಕಾಶ್, ಮುಖಂಡರಾದ ಶಿವಾನಂದ್, ಯು.ಪಿ.ನಾಗರಾಜ್, ರಾಘವೇಂದ್ರ ಶೆಟ್ಟಿ, ಸಂತೋಷ್ ಸೇರಿದಂತೆ ಇತರರು ಇದ್ದರು.