ಸುತ್ತ ಮುತ್ತಲ ಜಿಲ್ಲೆಗಳ ಮೌಲ್ಯಮಾಪಕರಿಗೆ ಒತ್ತಡ ಹೇರುವುದು ಸರಿಯಲ್ಲ: ಬಿ.ಪಾಲಾಕ್ಷಿ
ದಾವಣಗೆರೆ, ಮೇ 30- ಕೊರೊನಾ ಆತಂಕದ ನಡುವೆಯೂ ಕೋವಿಡ್ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭವಾಗಿದೆ. ಮೌಲ್ಯಮಾಪಕರಿಗೆ ಸ್ಯಾನಿಟೈಸರ್, ಹ್ಯಾಂಡ್ ವಾಶ್, ಮಾಸ್ಕ್ ನೀಡಲಾಗಿದೆ.
ದಾವಣಗೆರೆ ಕೇಂದ್ರದಲ್ಲಿ ಐಚ್ಛಿಕ ಕನ್ನಡ ಹಾಗೂ ಶಿಕ್ಷಣ ಶಾಸ್ತ್ರ ಮೌಲ್ಯಮಾಪನಕ್ಕೆ ಅವಕಾ ಶವಿದ್ದು ಶುಕ್ರವಾರ 65 ಮಂದಿ ಮೌಲ್ಯಮಾಪನ ಮಾಡಿದ್ದಾರೆ.
ಅನ್ಯ ಜಿಲ್ಲೆಗಳಿಂದ ಬರುವ ಉಪನ್ಯಾಸಕಿಯರಿಗೆ ಪಿಜೆ ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೌಲ್ಯಮಾಪನದ ವೇಳೆ ಕುಡಿಯುವ ನೀರು ಹಾಗೂ ಊಟವನ್ನು ಪಾರ್ಸೆಲ್ ನೀಡಲಾಗುತ್ತಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ವೀಕೇಂದ್ರೀಕರಣಗೊಳಿಸದೇ ಇರುವುದಕ್ಕೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಪಾಲಾಕ್ಷಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಶನಿವಾರ `ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು, ಬೇರೆ ಜಿಲ್ಲೆಗಳಿಂದ ಬಂದವರಿಗೆ ಊಟ, ವಸತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವುದಾಗಿ ಕೇಳಿದ್ದೇವೆ. ಇಲಾಖೆಯೂ ಒಪ್ಪಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರು ಬಂದು ಕಾರ್ಯನಿರ್ವಹಿಸಿದರೆ ಮಾಡಲಿ. ಮೌಲ್ಯಮಾಪನ ಬಹಿಷ್ಕರಿಸುವುದು ನಮ್ಮ ಉದ್ದೇಶವಲ್ಲ. ಆದರೆ ಬರಲಾಗದೆ ಇದ್ದವರಿಗೆ ಪದೇ ಪದೇ ಒತ್ತಡ ಹೇರುವುದನ್ನು ಖಂಡಿಸುವುದಾಗಿ ಹೇಳಿದರು.
ಮೊದಲು ಈ ಜಿಲ್ಲೆಯವರಷ್ಟೇ ಮೌಲ್ಯಮಾಪನಕ್ಕೆ ಆಗಮಿಸಬೇಕೆಂಬ ಆದೇಶವಿತ್ತು. ಬೇರೆ ಜಿಲ್ಲೆಯವರು ಬರುವುದು ಕಡ್ಡಾಯವಲ್ಲ ಎನ್ನಲಾಗಿತ್ತು. ನಾವೂ ಸಹ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನಕ್ಕೆ ಅವಕಾಶ ನೀಡಲು ಕೇಳಿದ್ದೆವು. ಆಗ ಮೌಲ್ಯಮಾಪಕರ ಸಂಖ್ಯೆ ಕಡಿಮೆಯಾಗುತ್ತದೆ. ಯಾವುದೇ ತೊಂದರೆ ಆಗಲ್ಲ ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಮತ್ತೆ ನಿನ್ನೆ ಇಲಾಖೆ ಎಸ್.ಎಂ.ಎಸ್. ಮೂಲಕ ಬೇರೆ ಜಿಲ್ಲೆಯವರೂ ಬರಬೇಕು ಎಂದಿದೆ. ಈ ರೀತಿ ಗೊಂದಲ ಮಾಡಿದರೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದೆವು ಎಂದರು. ಅಕ್ಕ ಪಕ್ಕ ಜಿಲ್ಲೆಗಳ ಕೆಲ ಮೌಲ್ಯಮಾಪಕರು ತಾವಾಗಿಯೇ ಮೌಲ್ಯಮಾಪನಕ್ಕೆ ಹಾಜರಾಗಿದ್ದಾರೆ. ವಸತಿ, ಊಟ, ಸಾರಿಗೆ ಇಲ್ಲದೇ ಇರುವುದು. ಕರ್ಫ್ಯೂ ಭಯದಿಂದ ಕೆಲವರು ಬಂದಿಲ್ಲ. ಅವರಿಗೆ ಇಲಾಖೆ ಒತ್ತಡ ಹೇರುವುದು ಸರಿಯಲ್ಲ ಎಂದು ಪಾಲಾಕ್ಷಿ ಹೇಳಿದರು.