ಒಟ್ಟು 6 ಜನಕ್ಕೆ ಸೋಂಕು 17 ಜನ ಬಿಡುಗಡೆ
ಕೊರೊನಾ ಐಸೊಲೇಷನ್ ವಾರ್ಡ್ನ ಹೆಲ್ತ್ಕೇರ್ ವರ್ಕರ್ಗೆ ಸೋಂಕು ಬಂದಿರುವುದು ಆಘಾತಕ್ಕೆ ಕಾರಣವಾಗಿದೆ.
ದಾವಣಗೆರೆ, ಮೇ 31 – ನಗರದ ಕೊರೊನಾ ಚಿಕಿತ್ಸಾ ಘಟಕದ ಐಸೊಲೇಷನ್ ವಾರ್ಡ್ನಲ್ಲಿ ಕೆಲಸ ಮಾಡಿದ್ದ ಹೆಲ್ತ್ ವರ್ಕರ್ ಮೂಲಕ ಮೂವರಿಗೆ ಸೋಂಕು ತಗುಲಿದ ಆಘಾತಕಾರಿ ಘಟನೆ ನಡೆದಿದೆ.
ಭಾನುವಾರದಂದು ನಗರದಲ್ಲಿ ಆರು ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವರಲ್ಲಿ ಮೂವರಿಗೆ ನಿಯೋಜಿತ ಸಿ.ಜಿ. ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿದ್ದ ಹೆಲ್ತ್ ವರ್ಕರ್ ಮೂಲಕ ಸೋಂಕು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರದಲ್ಲಿ ಈ ಹಿಂದೆ ಬಾಷಾ ನಗರದ ನರ್ಸ್ ಒಬ್ಬರು ಕೊರೊನಾ ಸೋಂಕಿಗೆ ಸಿಲುಕಿದ್ದರು. ಆನಂತರ ದಲ್ಲಿ ಸಂಚಾರಿ ಪೊಲೀಸ್ ಪೇದೆಯೊಬ್ಬರಿಗೆ ಸೋಂಕು ತಗುಲಿತ್ತು. ಈಗ ಕೊರೊನಾ ಐಸೊಲೇಷನ್ ವಾರ್ಡ್ ನಲ್ಲೇ ಕಾರ್ಯ ನಿರ್ವಹಿಸುತ್ತಿರುವ ಹೆಲ್ತ್ಕೇರ್ ವರ್ಕರ್ಗೆ ಸೋಂಕು ಬಂದಿರುವುದು ಆಘಾತಕ್ಕೆ ಕಾರಣವಾಗಿದೆ.
ಹೆಲ್ತ್ಕೇರ್ ವರ್ಕರ್ ಮೂಲಕ ಸೋಂಕಿಗೆ ಗುರಿ ಯಾಗಿರುವವರು ಖಾಸಗಿ ಆಸ್ಪತ್ರೆಯೊಂ ದರ ವೈದ್ಯರು ಎಂದು ಹೇಳಲಾಗುತ್ತಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ಆದರೆ, ಅಧಿಕೃತವಾಗಿ ಈ ವಿಷಯವನ್ನು ಇನ್ನೂ ಖಚಿತ ಪಡಿಸಿಲ್ಲ. ಸೋಂಕಿತರ ಕುರಿತು ಜಿಲ್ಲಾಡಳಿತ ಇನ್ನೂ ಹೆಚ್ಚಿನ ವಿವರ ಬಿಡುಗಡೆ ಮಾಡಿಲ್ಲ ವಾದರೂ, ಆರೋಗ್ಯ ಕಾರ್ಯಕರ್ತರಾಗಿರುವ ಕಾರಣ ಅವರ ಸಂಪರ್ಕಕ್ಕೆ ನಾವೂ ಬಂದಿರಬಹುದೇ ಎಂಬ ಕಳವಳ ನಗರದ ಹಲವಾರು ಜನರಲ್ಲಿ ಉಂಟಾಗಿದೆ. ಈ ಹಿಂದೆ ನರ್ಸ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಾಗ ಜಿಲ್ಲಾಡಳಿತವು, ಆರೋಗ್ಯ ಕಾರ್ಯಕರ್ತೆಯ ಸಂಪರ್ಕಕ್ಕೆ ಬಂದವರು ಮಾಹಿತಿ ನೀಡುವಂತೆ ಕರೆ ನೀಡಿತ್ತು.
ಉಳಿದಂತೆ ರೋಗಿ ಸಂಖ್ಯೆ ಪಿ 2254ರ ಸಂಪರ್ಕದಿಂದ ಒಬ್ಬರಿಗೆ, ರೋಗಿ ಸಂಖ್ಯೆ ಪಿ 1378ರ ಸಂಪರ್ಕದಿಂದ ಒಬ್ಬರಿಗೆ ಹಾಗೂ ರೋಗಿ ಸಂಖ್ಯೆ ಪಿ 1852ರ ಸಂಪರ್ಕಕ್ಕೆ ಬಂದ ಇನ್ನೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದೇ ದಿನದಂದು 17 ಜನರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ರೋಗಿಗಳ ಸಂಖ್ಯೆ 1483, 1488, 1656,1657,1658, 1808, 1809, 1852, 1963, 1964, 2274, 2275, 2277, 2281, 1992, 625 ಆಗಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 31ಕ್ಕೆ ಇಳಿದಿದೆ. ಇದುವರೆಗೂ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.