ದಾವಣಗೆರೆ, ಮೇ 29- ಮುಂಗಾರು ಪ್ರಾರಂಭವಾಗಿದ್ದು, ಮಳೆ ಗಾಳಿಯಿಂದ ಸಾರ್ವಜನಿಕರ ಸುರಕ್ಷತೆಗೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬೆಸ್ಕಾಂ ಮಹಾನಗರಪಾಲಿಕೆಯೊಂದಿಗೆ ಕೈಜೋಡಿಸಿ ಮಳೆ ಗಾಳಿಯಿಂದಾಗಬಹುದಾದ ತೊಂದರೆಗಳನ್ನು ನಿವಾರಿಸಲು ಕಾರ್ಯಸೂಚಿಗಳನ್ನು ರಚಿಸಿಕೊಳ್ಳಲಾಗಿದೆ.
ಬಲವಾದ ಗಾಳಿಯಿಂದಾಗಿ ಬೀಳಬಹುದಾದ ಒಣಗಿದ ಮರಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವುದು. ಶಿಥಿಲಗೊಂಡಿರುವ ವಿದ್ಯುತ್ ಬೀದಿ ದೀಪದ ನಿಯಂತ್ರಣ ವ್ಯವಸ್ಥೆಯನ್ನು ದುರಸ್ಥಿಪಡಿಸಲು ಕ್ರಮ.
ಕೋವಿಡ್-19 ಕಾರಣ ಎಲ್ಲಾ ಶಾಲಾ, ಕಾಲೇಜುಗಳು ರಜೆಯನ್ನು ಘೋಷಿಸಿರುತ್ತವೆ. ಮಕ್ಕಳು ಮತ್ತು ಯುವಕರು ಗಾಳಿಪಟಗಳನ್ನು ಹಾರಿಸುವುದು ಸಾಮಾನ್ಯವಾಗಿದೆ. ವಿದ್ಯುತ್ ಮಾರ್ಗಗಳಿಗೆ ಸಿಕ್ಕಿಕೊಳ್ಳುವುದ ರಿಂದ ಗಾಳಿಪಟಗಳನ್ನು ಬಿಡಿಸಿಕೊಳ್ಳಲು ಹೋದಾಗ ಆಕಸ್ಮಿಕವಾಗಿ ಅವಘಡಗಳು ಸಂಭವಿಸಿರುವ ಉದಾಹರಣೆಗಳು ಇವೆ. ಈ ಬಗ್ಗೆ ಗಮನ ವಹಿಸುವುದು ಅವಶ್ಯಕವಾಗಿರುತ್ತದೆ. ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸಿ ಬೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಕೆ ಪಾಟೀಲ್ ತಿಳಿಸಿದ್ದಾರೆ.